ಕೃಷಿಕರು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು

24M.D.R.2
Published on

ಮದ್ದೂರು: ರೈತರು ಕೇಂದ್ರ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು ಎಂದು ಕೇಂದ್ರ ಕೃಷಿ ಸಚಿವಾಲಯದ ಎಣ್ಣೆಕಾಳು ಬೆಳೆಗಳ ವಿಭಾಗದ ಡೆಪ್ಯುಟಿ ಕಮಿಷನರ್ ಶ್ರೀವಾಸ್ತವ್ ಹೇಳಿದರು.


ಪಟ್ಟಣದ ತೋಟಗಾರಿಕೆ ಇಲಾಖೆಯ ನಿಖರ ಬೇಸಾಯ ಉತ್ಕೃಷ್ಟ ಕೇಂದ್ರಕ್ಕೆ ಶನಿವಾರ ದಿಢೀರ್ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಶ್ರೇಯೋಭಿವೃದ್ಧಿಗೆ ಕೇಂದ್ರ ಸರ್ಕಾರದ ನಿರಂತರವಾಗಿ ಶ್ರಮಿಸುತ್ತಿದೆ. ಇದರ ಸದುಪಯೋಗಕ್ಕೆ ರೈತರು ಮುಂದಾಬೇಕು ಎಂದು ಮನವಿ ಮಾಡಿದರು.


ತಾಳೆ ಬೆಳೆಗೆ ಎಲ್ಲೆಡೆ ಉತ್ತಮ ಬೇಡಿಕೆ ಇದೆ. ಸರ್ಕಾರದಿಂದ ಈ ಬೆಳೆ ಬೆಳೆಯಲು ಎಲ್ಲರೀತಿಯ ಸವಲತ್ತುಗಳನ್ನು ನೀಡುತ್ತಿದೆ. ಆದ್ದರಿಂದ, ರೈತರು ತಾಳೆ ಬೆಳೆ ಬೆಳೆಯಲು ಹೆಚ್ಚಿನ ಆದ್ಯತೆ ನೀಡುವ ಮೂಲಕ ಹೆಚ್ಚಿನ ಆದಾಯ ಗಳಿಸಬೇಕು ಎಂದು ತಿಳಿಸಿದರು.
ತಾಲೂಕಿನ ಕೆರೆಮೇಗಲದೊಡ್ಡಿಯಲ್ಲಿ ರೈತ ಚಂದ್ರಶೇಖರ್ ಅವರು ಬೆಳೆದಿರುವ ತಾಳೆ ಬೆಳೆ ಬೆಳೆದಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ರೈತ ಚಂದ್ರಶೇಖರ್ ಉತ್ತಮ ಬೆಳೆ ಬೆಳೆದಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.


ಪಟ್ಟಣದ ನಿಖರ ಬೇಸಾಯ ಉತ್ಕೃಷ್ಟ ಕೇಂದ್ರಕ್ಕೆ ಭೇಟಿ ನೀಡಿ ಕೇಂದ್ರದಲ್ಲಿ ನಡೆಯುತ್ತಿರುವ ಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ತೋಟಗಾರಿಕಾ ಇಲಾಖೆಯ ಅಪರ ನಿರ್ದೇಶಕ ಡಾ.ಪಿ.ಎಂ.ಸೊಬರದ, ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ್, ಮದ್ದೂರು ನಿಖರ ಬೇಸಾಯ ಉತ್ಕೃಷ್ಟತಾ ಕೇಂದ್ರದ ಯೋಜನಾಧಿಕಾರಿ ರಾಜು, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಕೆ.ಎಂ.ರೇಖಾ, ಸಹಾಯಕ ತೋಟಗಾರಿಕಾ ನಿರ್ದೇಶಕ ಚಂದ್ರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net