

ಮಡಿಕೇರಿ: ಸರ್ಕಾರದ ನಿರ್ದೇಶನದಂತೆ ಜಿಲ್ಲೆಯ ಎಲ್ಲಾ ಸಹಕಾರ ಬ್ಯಾಂಕ್‌ಗಳಲ್ಲಿ ಕೃಷಿಕರಿಗೆ ಸರ್ಕಾರದ ನಿರ್ದೇಶನದಂತೆ ಶೂನ್ಯ ಬಡ್ಡಿ ದರದಲ್ಲಿ ೩ ರಿಂದ ೫ ಲಕ್ಷ ರೂ.ವರೆಗೂ ಸಾಲ ನೀಡಲು ಮುಂದಾಗಲಾಗಿದೆ ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷ ಕೊಡಂದೇರ ಪಿ.ಗಣಪತಿ ತಿಳಿಸಿದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಉನ್ನತಿ ಭವನದ ದಿ.ಪಂದ್ಯಂಡ.ಐ.ಬೆಳ್ಯಪ್ಪ ಸ್ಮಾರಕ ಸಭಾಂಗಣದಲ್ಲಿ ಶನಿವಾರ ನಡೆದ ಬ್ಯಾಂಕಿನ ೯೯ ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೃಷಿಕರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಆ ನಿಟ್ಟಿನಲ್ಲಿ ಶೂನ್ಯ ಬಡ್ಡಿ ದರದಲ್ಲಿ ೫ ಲಕ್ಷ ರೂ.ವರೆಗೂ ಸಾಲವನ್ನು ಸಹಕಾರ ಬ್ಯಾಂಕುಗಳ ಮೂಲಕ ವಿತರಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಸರ್ಕಾರದ ಕೃಷಿ ಅಲ್ವಾವಧಿ ರೂ.೫ ಲಕ್ಷಕ್ಕೆ ಏರಿಸಿದೆ. ಹಾಗೆಯೇ ಮಧ್ಯಮಾವಧಿ ಬಡ್ಡಿ ರಿಯಾಯಿತಿ ಯೋಜನೆಯಡಿ ಗರಿಷ್ಠ ಮಿತಿ ರೂ.೧೫ ಲಕ್ಷಕ್ಕೆ ಹೆಚ್ಚಿಸಲಾಗಿದೆ. ಕೊಡಗು ಜಿಲ್ಲೆಯ ಖಾಯಂ ನಿವಾಸಿಗಳ ಮಕ್ಕಳು ದೇಶ ಮತ್ತು ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲು ಬ್ಯಾಂಕಿನಲ್ಲಿ ವಿದ್ಯಾ ಸಹಕಾರವೆಂಬ ವಿದ್ಯಾಭ್ಯಾಸ ಸಾಲದ ಯೋಜನೆಯನ್ನು ಗರಿಷ್ಠ ರೂ.೬೦ ಲಕ್ಷಗಳವರೆಗೆ ನೀಡಲಾಗುತ್ತಿದೆ ಎಂದರು.
ಸಹಕಾರ ಬ್ಯಾಂಕ್‌ಗಳು ಸರ್ಕಾರದ ಆದೇಶವನ್ನು ಕಡ್ಡಾಯವಾಗಿ ಪ್ರಥಮ ಆದ್ಯತೆಯಲ್ಲಿ ಪಾಲಿಸಬೇಕು. ಯಾವುದೇ ಕಾರಣಕ್ಕೂ ಲೆಕ್ಕ ಪರಿಶೋಧನೆಯನ್ನು ವಿಳಂಬ ಮಾಡಬಾರದು. ಜಿಲ್ಲೆಯಲ್ಲಿ ೭೩ ವಿವಿಧ ರೀತಿಯ ಸಹಕಾರ ಸಂಘಗಳು ಇದ್ದು, ಆಯಾಯ ಆರ್ಥಿಕ ವರ್ಷದಲ್ಲಿ ಲೆಕ್ಕಪರಿಶೋಧನೆ ಮಾಡಿಸಿಕೊಳ್ಳಬೇಕು. ಈ ಸಂಬಂಧ ವರದಿಯನ್ನು ಪ್ರತೀ ವರ್ಷ ಡಿಸಿಸಿ ಬ್ಯಾಂಕ್‌ಗೆ ಸಲ್ಲಿಸುವಂತೆ ಇದೇ ಸಂದರ್ಭದಲ್ಲಿ ತಿಳಿಸಿದರು.
ಸಹಕಾರ ಕ್ಷೇತ್ರದಲ್ಲಿ ಕೃಷಿಕರ ಪಾತ್ರ ಮಹತ್ವದ್ದಾಗಿದೆ. ಆ ನಿಟ್ಟಿನಲ್ಲಿ ಸಹಕಾರ ಕ್ಷೇತ್ರದ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು. ಸಹಕಾರ ಬ್ಯಾಂಕ್‌ಗಳು ಉಳಿದಲ್ಲಿ ಕೃಷಿಕರ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ನುಡಿದರು.
ಸದಸ್ಯತ್ವ ಮತ್ತು ಪಾಲು ಬಂಡವಾಳ ಮಾರ್ಚ್ ಅಂತ್ಯಕ್ಕೆ ಒಟ್ಟು ೨೮೭ ಸಹಕಾರ ಸಂಘಗಳು ಬ್ಯಾಂಕಿನ ಸದಸ್ಯತ್ವವನ್ನು ಪಡೆದಿದ್ದು, ಬಿ ವರ್ಗದ ಸದಸ್ಯ ಸಂಘಗಳಿಂದ ರೂ.೩೧.೪೪ ಕೋಟಿ ಪಾಲು ಬಂಡವಾಳ ಹಾಗೂ ದೊಡ್ಡ ಮೊತ್ತದ ಸಾಲ ಪಡೆಯುವ ಸಿ ವರ್ಗದ ಸದಸ್ಯರಿಂದ ರೂ. ೦.೦೩ ಕೋಟಿ ಒಟ್ಟು ೩೧.೪೭ ಕೋಟಿ ಷೇರು ಬಂಡವಾಳ ಸಂಗ್ರಹಿಸಿದೆ. ಕಳೆದ ಸಾಲಿಗೆ ಹೋಲಿಸಿದಾಗ ರೂ.೩.೦೪ ಕೋಟಿ ಪಾಲು ಬಂಡವಾಳದಲ್ಲಿ ಹೆಚ್ಚಳವಾಗಿದೆ ಎಂದು ಬಾಂಡ್ ಗಣಪತಿ ಅವರು ವಿವರಿಸಿದರು.
ವಿವಿಧ ಸಹಕಾರ ಬ್ಯಾಂಕುಗಳ ಅಧ್ಯಕ್ಷ ನಂದ ಸುಬ್ಬಯ್ಯ, ಎಂ.ಬಿ.ದೇವಯ್ಯ, ರವಿಬಸಪ್ಪ, ನಾಗೇಶ್ ಕುಂದಲ್ಪಾಡಿ, ಕೃಷ್ಣ ಗಣಪತಿ ಇತರರು ಸಹಕಾರ ಸಂಘಗಳ ಬೆಳವಣಿಗೆ ಮತ್ತು ಅಭಿವೃದ್ಧಿ ಸಂಬಂಧಿಸಿದಂತೆ ಹಲವು ವಿಷಯ ಪ್ರಸ್ತಾಪಿಸಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಎಸ್.ಪೂವಯ್ಯ, ನಿರ್ದೇಶಕ ಹೊಟ್ಟೆಂಗಡ ಎಂ.ರಮೇಶ್, ಹೊಸೂರು ಜೆ.ಸತೀಶ್ ಕುಮಾರ್, ಕೆ.ಅರುಣ್ ಭೀಮಯ್ಯ, ಕಾಂಗೀರ ಎನ್.ಸತೀಶ್, ಪೂಳಂಡ ಪಿ.ಪೆಮ್ಮಯ್ಯ, ಎಚ್.ಕೆ.ಮಾದಪ್ಪ, ಸಹಕಾರ ಸಂಘಗಳ ಉಪ ನಿಬಂಧಕ ಜಿ.ಆರ್.ವಿಜಯ್ ಕುಮಾರ್, ಬ್ಯಾಂಕಿನ ಸಿಇಒ ಪ್ರವೀಣ್.ಬಿ.ನಾಯಕ್, ಪ್ರಧಾನ ವ್ಯವಸ್ಥಾಪಕಿ ಬೋಜಮ್ಮ ಜಿ.ಎಂ ಇತರರು ಇದ್ದರು.