ಕೃಷಿಕರಿಗೆ ಗೋಪೂಜೆ ಸಡಗರ

sri gopooja
ಶೃಂಗೇರಿ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಅವರು ಮಠದ ಗೋಶಾಲೆಯಲ್ಲಿ ಗೋವುಗಳಿಗೆ ಪಲ ನೀಡಿದರು.
Published on

ಶೃಂಗೇರಿ: ತಾಲೂಕಿನಾದ್ಯಂತ ಬೆಳಕಿನ ಹಬ್ಬವನ್ನು ಬುಧವಾರ ಸಂಭ್ರಮದಿಂದ ಆಚರಿಸಲಾಯಿತು. ಮನೆಗಳಲ್ಲಿ ರಂಗವಲ್ಲಿ ಬಿಡಿಸಿ, ತಳಿರುತೋರಣ ಕಟ್ಟಿ ದೇವರಿಗೆ ವಿಶೇಷಪೂಜೆ ಸಲ್ಲಿಸಿದರು.

ಕೊಟ್ಟಿಗೆ ಬಾಗಿಲುಗಳಿಗೆ ಬಾಳೆಮರ ಕಟ್ಟಿ ಮಾವಿನಸೊಪ್ಪು ತೋರಣದಿಂದ ಶೃಂಗರಿಸಲಾಗಿತ್ತು. ಜಾನುವಾರುಗಳ ಕುತ್ತಿಗೆಗೆ ಅಡಕೆಹಿಂಗಾರ, ಹೂವು, ಪಚ್ಚೆತೆನೆ, ಬಾಳೆಹಣ್ಣು, ವೀಳ್ಯದೆಲೆ, ಕಾಡುಕಿತ್ತಳೆಗಳ ಮಾಲೆ ಮಾಡಿ ಕಟ್ಟಿ ಪೂಜಿಸಲಾಯಿತು. ಗೋವುಗಳಿಗೆ ವಿಶೆಷಪೂಜೆ ಸಲ್ಲಿಸಿ, ಸಿಹಿತಿನಿಸು ಹಾಗೂ ಸಪ್ಪೆರೊಟ್ಟಿ ನೀಡಿದ ಬಳಿಕ ಗೋವುಗಳನ್ನು ಕೊಟ್ಟಿಗೆಯಿಂದ ಹೊರಗೆ ಬಿಡಲಾಯಿತು. ಸಂಜೆ ಗೋವುಗಳು ಮರಳಿದ ಬಳಿಕ ಮಹಿಳೆಯರು ಆರತಿ ಮಾಡಿ ಗೋವುಗಳನ್ನು ಸ್ವಾಗತಿಸಿದರು. ರಾತ್ರಿ ಜಮೀನಿನಲ್ಲಿ ಕೋಲುದೀಪ ಹಚ್ಚಿದರು.

ಜಮೀನಿನ ಹತ್ತಾರಗಳನ್ನು ತೊಳೆದು ಒಂದೆಡೆ ಜೋಡಿಸಿ ತೆಂಗಿನಕಾಯಿ ಒಡೆದ, ಹೂಗಳನ್ನು ಸಮರ್ಪಿಸಿ ಮೇಳಿದೇವರ ಪೂಜೆ ನೆರವೇರಿಸಿದರು. ಹಲವು ಗ್ರಾಮೀಣ ಪ್ರದೇಶಗಳಲ್ಲಿ ಅಂಟಿಕೆ-ಪಿಂಟಿಕೆ ತಂಡ ಮನೆಗಳಿಗೆ ಭೇಟಿ ನೀಡಿ ಜ್ಯೋತಿಬೆಳಗಿಸಿದರು.

ಮಧ್ಯಾಹ್ನ ಹೋಳಿಗೆ, ಹಾಲುಪಾಯಸ, ವಿವಿಧ ಪದಾರ್ಥಗಳನ್ನು ಮನೆಮಂದಿ ಜತೆಗೂಡಿ ಸವಿದರು. ರಾತ್ರಿ ಮನೆಯ ಹೊಸ್ತಿಲಿನಲ್ಲಿ, ತುಳಸಿಕಟ್ಟೆಯಲ್ಲಿ ದೀಪ ಹಚ್ಚಿಟ್ಟು ಮಕ್ಕಳ ಜತೆಗೂಡಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಶ್ರೀಮಠದಲ್ಲಿ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಅವರು ಗೋಶಾಲೆಯಲ್ಲಿ ಗೋಪೂಜೆಯಲ್ಲಿ ಭಾಗಿಯಾದರು. ಯತಿವರ್ಯರು ಶ್ರೀಮಠದ ಎಲ್ಲ ದೇವಾಲಯಗಳನ್ನು ದರ್ಶಿಸಿ ವಿಶೇಷಪೂಜೆಯಲ್ಲಿ ಭಾಗಿಯಾದರು. ಸಂಜೆ ಜಗನ್ಮಾತೆ ಸನ್ನಿಧಿಯಲ್ಲಿ ಬಲೀಂದ್ರ ಪೂಜೆ, ಮಹಾಜನರ ಹಾಗೂ ಮಹಾರಾಜರ ಕಾಣಿಕೆ ಸಮರ್ಪಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net