ಕೃಷಿಕರ ಸಮಸ್ಯೆ ಬಗೆಹರಿಸಲು ಆಗ್ರಹ

rait sang
Published on

ಬೀದರ್: ಅತಿವೃಷ್ಟಿಯಿಂದ ಬೆಳೆ ಹಾನಿ ಪರಿಹಾರ ಸೇರಿ ಜಿಲ್ಲೆಯ ರೈತರ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ರೈತ ಸಂಘ ಹಕ್ಕೊತ್ತಾಯ ಮಂಡಿಸಿದೆ.
ನಗರದಲ್ಲಿ ಸಿಎಂಗೆ ಬರೆದ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದ ಸಂಘದ ಪ್ರಮುಖರು, ಇತ್ತೀಚಿನ ಭಾರಿ ಮಳೆಯಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಾಗಿದ್ದು, ಸೋಯಾಬೀನ್, ತೊಗರಿ ಸೇರಿ ವಿವಿಧ ಬೆಳೆಗಳು ಮಣ್ಣು ಪಾಲಾಗಿವೆ. ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ಘೋಷಿಸಿದಂತೆ ಶೂನ್ಯ ಬಡ್ಡಿಯಲ್ಲಿ 5 ಲಕ್ಷ ರೂ.ವರೆಗೆ ಎಲ್ಲ ಕೃಷಿಕರಿಗೆ ಸಾಲ ಕೊಡಬೇಕು. ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆಗೆ ಪರ್ಯಾಯ ವ್ಯವಸ್ಥೆ ಮಾಡಿ ರೈತರ ಹಿತ ಕಾಪಾಡಬೇಕು. ಹಿಂದಿನ ಬಿಜೆಪಿ ಸರ್ಕಾರದಂತೆ ಮುಖ್ಯಮಂತ್ರಿ ರೈತ ಸಮ್ಮಾನ್ ಯೋಜನೆಯಡಿ ಪ್ರತಿವರ್ಷ ಎರಡು ಹಂತದಲ್ಲಿ 4 ಸಾವಿರ ರೂ. ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ರಸಗೊಬ್ಬರಗಳಿಗೆ ಎಂಆರ್ಪಿಗಿಂತ ಹೆಚ್ಚಿನ ಹಣ ರೈತರಿಂದ ವಸೂಲಿ ಮಾಡುತ್ತಿದ್ದು, ಕಡಿವಾಣ ಹಾಕಬೇಕು. ಎಲ್ಲ ಬೇಡಿಕೆಗಳನ್ನು ಪರಿಹರಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ್, ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ, ಪ್ರಮುಖರಾದ ಬಾಬುರಾವ್ ಜೋಳದಾಬಕಾ, ಚಂದ್ರಶೇಖರ ಜಮಖಂಡಿ, ಸತೀಶ್ ನನ್ನೂರ, ಶಂಕ್ರೆಪ್ಪ ಪಾರಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net