

ಎನ್.ಆರ್.ಪುರ: ಅಪಘಾತದಲ್ಲಿ ಸಿಂಸೆ ಗ್ರಾಮದ ಕೃಷಿಕ ರಾಮಪ್ಪ ಪೂಜಾರಿ (62) ಮೃತಪಟ್ಟಿದ್ದಾರೆ. ಅವರ ನೇತ್ರದಾನ ಮಾಡಲಾಗಿದೆ.
ಸೋಮವಾರ ಬೆಳಗ್ಗೆ ಶಾಂತಿ ಭವನ ಸರ್ಕಲ್ ಬಳಿ ನಡೆದ ಅಪಘಾತದಲ್ಲಿ ರಾಮಪ್ಪ ಪೂಜಾರಿ ಅವರ ತಲೆಗೆ ತೀವ್ರ ಪೆಟ್ಟಾಗಿ ಕೋಮಾಕ್ಕೆ ತೆರಳಿದ್ದರು. ರಾತ್ರಿ 11.50ರ ಹೊತ್ತಿಗೆ ಮೃತಪಟ್ಟರು. ಸ್ಥಳೀಯ ಗಿರಿರಾಜ್ ಅವರು ಮೃತರ ರಾಮಪ್ಪ ಅವರ ನೇತ್ರದಾನ ಮಾಡುವಂತೆ ಕುಟುಂಬದವರ ಮನವೊಲಿಸಿ ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ಸಂಪರ್ಕಿಸಿದರು. ಆಸ್ಪತ್ರೆ ವೈದ್ಯ ತಂಡ ಮಂಗಳವಾರ ಬೆಳಗಿನ ಜಾವ 3 ಗಂಟೆಗೆ ಆಗಮಿಸಿ ರಾಮಪ್ಪ ಅವರ ಎರಡೂ ಕಣ್ಣುಗಳನ್ನು ಸಂಗ್ರಹಿಸಿಕೊಂಡಿತು. ಇದರಿಂದ 4 ಜನರಿಗೆ ದೃಷ್ಟಿ ಸಿಗಲಿದೆ. ರಾಮಪ್ಪ ಪೂಜಾರಿ ಅವರ ಕುಟುಂಬದ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಪೊಲೀಸ್ ಇಲಾಖೆ, ಆಸ್ಪತ್ರೆ ಸಿಬ್ಬಂದಿ ಸಹಕಾರ ನೀಡಿದರು.