

ಬಾಗೇಪಲ್ಲಿ : ತಾಲೂಕಿನಲ್ಲಿ ಕಳೆದ ಏಳೆಂಟು ದಿನಗಳಿಂದ ಸುರಿಯುತ್ತಿರುವ ಜಡಿ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ಕೃಷಿ ಬೆಳೆಗಳು ನಾಶವಾಗಿವೆ.
ಮಳೆಯ ಹೊಡೆತಕ್ಕೆ ಅನ್ನದಾತ ತತ್ತರಿಸಿ ಹೋಗಿದ್ದಾನೆ. ಮುಂಗಾರು ಮಳೆಯಾಶ್ರಿತ ಬಹುತೇಕ ಕೃಷಿ ಬೆಳೆಗಳು ನವೆಂಬರ್, ಡಿಸೆಂಬರ್‌ನಲ್ಲಿ ರೈತನ ಕೈಸೇರುತ್ತವೆ. ಆದರೆ, ಈ ಬಾರಿಯ ಜಡಿ ಮಳೆಯಿಂದಾಗಿ ಬೆಳೆ ಜಮೀನಿನಲ್ಲಿಯೇ ಹಾಳಾಗುತ್ತಿವೆ. ಶೇಂಗಾ, ರಾಗಿ, ಮೆಕ್ಕೆ ಜೋಳದ ಬೆಳೆಗಳು ಮಳೆಯ ನೀರಿನಲ್ಲಿ ಸಿಲುಕಿ ನಾಶವಾಗಿದೆ.
ಬಯಲುಸೀಮೆ ರೈತರ ಮುಂಗಾರು ಹಂಗಾಮಿನ ಮಳೆಯಾಶ್ರಿತ ಪ್ರಮುಖ ಬೆಳೆಯಾದ ಶೇಂಗಾ ಪ್ರಸಕ್ತ ವರ್ಷವೂ ಕೈಹಿಡಿಯುತ್ತಿಲ್ಲ. ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ಶೇಂಗಾ ಮೇವು ಕೂಡ ಹಾಳಾಗಿದೆ. ಹವಾಮಾನ ವೈಪರೀತ್ಯದಿಂದ ಸೃಷ್ಟಿಯಾದ ಈ ಸಮಸ್ಯೆಗೆ ಶೇಂಗಾ ಬೆಳೆಗಾರರು ಕಂಗಾಲಾಗಿದ್ದಾರೆ.
ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ, ಗೂಳೂರು, ಮಿಟ್ಟೇಮರಿ ಹೋಬಳಿ ವ್ಯಾಪ್ತಿಯ ರೈತರು ಶೇಂಗಾವನ್ನು ಪ್ರಮುಖ ಬೆಳೆಯಾಗಿ ಬೆಳೆಯುತ್ತಾರೆ. ಪ್ರಸಕ್ತ ವರ್ಷ ನಿರೀಕ್ಷೆಗೂ ಮೀರಿ ಮಳೆಯಾಗಿದೆ. ವಾಡಿಕೆಗಿಂತ ಹೆಚ್ಚು ಮಳೆಯಾದರೂ ರೈತರಲ್ಲಿ ಖುಷಿ ಇಲ್ಲದಂತಾಗಿದೆ. ಶೇಂಗಾ ಬೆಳೆಗೆ ಮಳೆಯಿಂದ ಪ್ರಯೋಜನವಾಗಿಲ್ಲ. ಅಗತ್ಯ ಇರುವಾಗ ಕೈಕೊಟ್ಟ ಮಳೆ, ಬೆಳೆ ಕೈಸೇರುವ ಹಂತದಲ್ಲಿ ಅತಿಯಾಗಿ ಸುರಿದು ಸಂಪೂರ್ಣ ನಾಶ ಮಾಡಿದೆ ಎಂಬ ಕೊರಗು ಈ ಭಾಗದ ರೈತರದ್ದಾಗಿದೆ. ಶೇಂಗಾ ಬಿತ್ತನೆಯ ಸಹವಾಸವೇ ಬೇಡ ಎನ್ನುವಷ್ಟರ ಮಟ್ಟಕ್ಕೆ ರೈತರು ಹೈರಾಣಾಗಿದ್ದಾರೆ.
5 ಎಕರೆ ಜಮೀನಿನಲ್ಲಿ ಬೆಳೆದಿದ್ದ ಶೇಂಗಾ ಬೆಳೆಯನ್ನು ಕಟಾವು ಮಾಡಿ ಮನೆಗೆ ತರಬೇಕು ಎನ್ನುವಷ್ಟರಲ್ಲಿ ಜಡಿ ಮಳೆ ಆರಂಭವಾಗಿದೆ. ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ಕೈಗೆ ಬಂದ ಫಸಲು ಬಾಯಿಗೆ ಬಾರದೆ ಕೊಳೆಯುತ್ತಿರುವ ಕಾರಣ ಬದುಕು ಮೂರಾಬಟ್ಟೆಯಾಗಿದೆ. -ಬಿ.ವಿ.ವೆಂಕಟರವಣ, ರೈತ, ನಲ್ಲಸಾನಂಪಲ್ಲಿ ತಾಲೂಕಿನ ಕೆಲ ರೈತರು ಶೇಂಗಾ ಬೆಳೆ ಕಟಾವು ಮಾಡಿದರೆ, ಇನ್ನೂ ಕೆಲವರು ಜಮೀನಿನಲ್ಲಿ ಬಿಟ್ಟಿದ್ದರು. ಆದರೆ, ಸತತ ಮಳೆಗೆ ಶೇಂಗಾ ಬೆಳೆ ಕೊಳೆತು ಹೋಗಿದೆ. ಸಾಲ ಸೋಲ ಮಾಡಿ ರೈತರು ಕಷ್ಟಪಟ್ಟು ಬೆಳೆದಿದ್ದ ಬೆಳೆ ಮಳೆಯಿಂದಾಗಿ ಕಣ್ಣೆದುರೇ ನಾಶವಾಗುತ್ತಿದೆ. ಹಾಗಾಗಿ ಮಳೆಯಿಂದ ಉಂಟಾದ ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು. - ಜಿ.ಎಸ್.ಸುಧಾಕರರೆಡ್ಡಿ, ತಾಪಂ ಮಾಜಿ ಸದಸ್ಯ, ಬಾಗೇಪಲ್ಲಿ