ಕೃಷಿಕ ಭವನಕ್ಕಾಗಿ ಸಿಎಂ ಜತೆ ಸಮಾಲೋಚನೆ, ಡಾ.ಶ್ರೀ ಪಂಡಿತಾರಾಧ್ಯ ಸ್ವಾಮೀಜಿ
Published on:
Copied
Follow Us
ದಾವಣಗೆರೆ: ಆನಗೋಡಿನಲ್ಲಿ ರೈತರ ಭವನ ನಿರ್ಮಾಣಕ್ಕಾಗಿ ಪ್ರಸ್ತಾವನೆ, ಕ್ರಿಯಾಯೋಜನೆ ರೂಪಿಸಿ ನೀಡಿದಲ್ಲಿ ಸಿಎಂ ಹಾಗೂ ಕೃಷಿ ಸಚಿವರೊಂದಿಗೆ ಸಮಾಲೋಚಿಸುವುದಾಗಿ ಸಾಣೇಹಳ್ಳಿಯ ಡಾ.ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಆನಗೋಡಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ, ಓಬೇನಹಳ್ಳಿ ಕಲ್ಲಿಂಗಪ್ಪ, ಸಿದ್ದನೂರು ನಾಗರಾಜಚಾರ್ ಅವರ 30ನೇ ವರ್ಷದ ರೈತ ಹುತಾತ್ಮರ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ರೈತ ಹುತಾತ್ಮರ ಸಮಾಧಿ ಸ್ಥಳದಲ್ಲಿ ರೈತರ ಭವನ, ಅಧ್ಯಯನ ಕೇಂದ್ರ ನಿರ್ಮಿಸುವ ಸಲಹೆ ಸಾಕಾರಗೊಳ್ಳಲು ಪ್ರಸ್ತಾವನೆ ನೀಡಬೇಕು. ಈ ವಿಚಾರದಲ್ಲಿ ಖುದ್ದು ಸಂಸದರೇ ಸರ್ಕಾರದಿಂದ ಪಟ್ಟು ಹಿಡಿದು ಕೆಲಸ ಮಾಡಿಸುವ ಭರವಸೆ ತಮಗಿದೆ ಎಂದೂ ಹೇಳಿದರು.
ರೈತರು ಶಕ್ತಿವಂತರಾಗದಿದ್ದರೆ ಅವರ ಮೇಲೆ ಸವಾರಿ ನಡೆಯುತ್ತಿರುತ್ತದೆ. ರೈತರು ಬಲಿಷ್ಠರಾಗಬೇಕು. ಸಾರ್ವಜನಿಕ ಹಿತ ಬಯಸುವ, ನಿಮ್ಮ ಕೆಲಸ ಮಾಡಿಸಿಕೊಡುವವರಿಗೆ ಚುನಾವಣೆ ಸಂದರ್ಭದಲ್ಲಿ ಮತ ನೀಡುವ ಗಟ್ಟಿ ನಿಲುವು ಪ್ರದರ್ಶಿಸಬೇಕು. ಭೂಮಿ ಮತ್ತು ರೈತರಿಲ್ಲದೆ ಜೆರಾಕ್ಸ್ ಮೂಲಕ ಧಾನ್ಯ ಬೆಳೆಯಲಾಗದು. ಇಡೀ ದೇಶ ಅನ್ನದ ಮೇಲೆ ನಿಂತಿದೆ. ಇದು ಇಲ್ಲವಾದಲ್ಲಿ ಆತಂಕ ಹೆಚ್ಚಲಿದೆ ಎಂದರು.
ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ ರೈತರ ಭವನಕ್ಕಾಗಿ ತಾವು 10 ಲಕ್ಷ ರೂ. ಅನುದಾನ ನೀಡಿದ್ದು, ಸಮಿತಿ ಸದಸ್ಯರು ಬಂದಲ್ಲಿ ಎಂಎಲ್ಸಿಗಳ ಅನುದಾನ ಕೊಡಿಸಲಾಗುವುದು. ಕೇಂದ್ರ ಸರ್ಕಾರದ ಅನುದಾನ ಸಿಗದು. ಬದಲಾಗಿ ರಾಜ್ಯ ಸರ್ಕಾರದ ನೆರವು ಕೊಡಿಸಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ಪಟೇಲ್ ಮಾತನಾಡಿ ಚುನಾವಣೆಗಳಲ್ಲಿ ರೈತರು ಭ್ರಷ್ಟಾಚಾರ ಎಸಗದಿರುವುದೇ ಹುತಾತ್ಮರಿಗೆ ನೀಡುವ ನಿಜವಾದ ಸನ್ಮಾನ. ರೈತ ಹುತಾತ್ಮರು, ರೈತ ಚಳವಳಿಗಳಲ್ಲಿ ಮೃತರಾದವರ ಕುಟುಂಬಗಳಿಗೆ ಸರ್ಕಾರ ಮಾಸಾಶನ ನೀಡುವಂತಾಗಬೇಕು ಎಂದರು.
ರೈತರ ಬೆಳೆಹಾನಿ ಹಿನ್ನೆಲೆಯಲ್ಲಿ ಎಕರೆಗೆ ಕನಿಷ್ಟ 20 ಸಾವಿರ ರೂ. ಪರಿಹಾರ ನೀಡಬೇಕು ಎಂಬುದೂ ಸೇರಿ ಕೆಲವು ವಿಚಾರಗಳ ಬಗ್ಗೆ ಶೀಘ್ರವೇ ಸಭೆ ಕರೆಯಲಾಗುವುದು. ಮುಖಂಡರು ಸಹಕರಿಸಬೇಕು ಎಂದು ರೈತ ಮುಖಂಡ ಎಂಎಸ್‌ಕೆ ಶಾಸ್ತ್ರಿ ತಿಳಿಸಿದರು.
ಹೊನ್ನೂರು ಮುನಿಯಪ್ಪ ಮಾತನಾಡಿ ರೈತರ ಆತ್ಮಹತ್ಯೆ ಹಚ್ಚಿರುವ ಹಿನ್ನೆಲೆಗಳಲ್ಲಿ ಸರ್ಕಾರಗಳು ರೈತಪರ ಆಲೋಚನೆ ಮಾಡಬೇಕು. ಸಾಲಕ್ಕೆ ಆನ್‌ಲೈನ್ ರೂಪಿಸುವ ಸರ್ಕಾರ ರೈತರ ಬೆಳೆಗೆ ಆನ್‌ಲೈನ್ ದರ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ಬಸವರಾಜನಾಯ್ಕ, ರೈತ ಹುತಾತ್ಮರ ಸ್ಮರಣಾರ್ಥ ಸಮಿತಿ ಅಧ್ಯಕ್ಷ ಎನ್.ಜಿ.ಪುಟ್ಟಸ್ವಾಮಿ, ಗೌರವಾಧ್ಯಕ್ಷ ಎಚ್.ನಂಜುಂಡಪ್ಪ, ಮುಖಂಡರಾದ ಆವರಗೆರೆ ರುದ್ರಮುನಿ, ಬೆಳವನೂರು ನಾಗೇಶ್ವರರಾವ್, ಶಾಮನೂರು ಲಿಂಗರಾಜ್, ಬಲ್ಲೂರು ರವಿಕುಮಾರ್, ಅರುಣ್‌ಕುಮಾರ್ ಕುರುಡಿ, ಆಲೂರು ನಿಂಗರಾಜ್, ಅಣಬೇರು ಜೀವನಮೂರ್ತಿ, ಕಕ್ಕರಗೊಳ್ಳ ಕಲ್ಲಿಂಗಪ್ಪ, ಆರ್.ಜಿ.ಹಳ್ಳಿ ರಾಜಶೇಖರ್, ಆವರಗೊಳ್ಳ ಷಣ್ಮುಖಪ್ಪ ಇತರರಿದ್ದರು.