ಕೃಷಿ ಹೊಂಡಕ್ಕೆ ಹೆಚ್ಚಿದ ಬೇಡಿಕೆ

h7-krisihonda 2
Published on

ಮರಿದೇವ ಹೂಗಾರ ಹುಬ್ಬಳ್ಳಿ

ಲಾಕ್​ಡೌನ್ ಮತ್ತು ಬೇಸಿಗೆ ವೇಳೆಯೇ ಧಾರವಾಡ ಜಿಲ್ಲಾದ್ಯಂತ 184 ಕೃಷಿ ಹೊಂಡ ನಿರ್ವಣವಾಗಿವೆ. ಕೃಷಿ ಇಲಾಖೆ ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿ 2020-21ನೇ ಸಾಲಿನ ನರೇಗಾ ಯೋಜನೆ ಅಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ 2 ಕೋಟಿ 89 ಲಕ್ಷ ರೂ. ವೆಚ್ಚ ಮಾಡಲಾಗಿದ್ದು, 535 ಕೃಷಿ ಹೊಂಡ ನಿರ್ವಿುಸಲು ಉದ್ದೇಶಿಸಲಾಗಿದೆ. 351 ಹೊಂಡ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಇದಕ್ಕಾಗಿ 1,05,404 ಮಾನವ ದಿನಗಳ ಬಳಕೆಯಾಗಿದೆ.

9*8, 12*10, 7*7, 12*12 ಮೀ. ಹೀಗೆ ವಿವಿಧ ಅಳತೆಯ ಹೊಂಡ ನಿರ್ವಿುಸಲಾಗುತ್ತಿದ್ದು, 12*12 ಮೀ. ಅಳತೆಯ ಕೃಷಿ ಹೊಂಡಕ್ಕೆ 87,500 ರೂ. ಸಹಾಯ ಧನ ನೀಡಲಾಗುತ್ತಿದೆ. ಉಳಿದಂತೆ ರೈತರು ಹೆಚ್ಚುವರಿ ಖರ್ಚು ಹಾಕಿಕೊಳ್ಳಬೇಕಿದೆ. ವಿಶೇಷವೆಂದರೆ ಒಬ್ಬ ರೈತ ನರೇಗಾ ಯೋಜನೆ ಅಡಿ 2 ಲಕ್ಷ ರೂ. ಲಾಭ ಪಡೆಯಬಹುದು.

ರೈತರು ಇತ್ತೀಚೆಗೆ ನರೇಗಾ ಯೋಜನೆ ಲಾಭ ಪಡೆಯಲು ಮುಂದೆ ಬರುತ್ತಿದ್ದಾರೆ. ಇದರ ಲಾಭ ಮತ್ತು ಪರಿಣಾಮ ಎರಡನ್ನೂ ಅರ್ಥ ಮಾಡಿಕೊಂಡಿರುವುದೇ ಇದಕ್ಕೆ ಕಾರಣ. ಆಯಾ ಗ್ರಾಪಂ ಪಿಡಿಒ, ಸದಸ್ಯರು ಮಾನವ ದಿನಗಳ ಬಳಕೆಯ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಇದರಿಂದ ರೈತರು ಕೃಷಿ ಹೊಂಡ ನಿರ್ಮಾಣ ಮಾಡಿಕೊಳ್ಳಲು ಶುರುವಿಟ್ಟುಕೊಂಡಿದ್ದಾರೆ.

ಬದುವು ಮಾಸಾಚರಣೆ ಅಭಿಯಾನ: ಧಾರವಾಡ ಜಿಲ್ಲೆಯಲ್ಲಿ ಬದು ಮಾಸಾಚರಣೆ ಅಭಿಯಾನ ಶುರುವಾಗಿದೆ. ಒಬ್ಬೊಬ್ಬ ರೈತರು ತಮ್ಮ ಹೊಲದಲ್ಲಿ ಬದು ನಿರ್ಮಾಣ ಮಾಡಿಕೊಳ್ಳುವುದರ ಜೊತೆಗೆ ನೀರು ಹಿಡಿದಿಟ್ಟುಕೊಂಡು ಬೆಳೆ ಬೆಳೆಯುವ ಪದ್ಧತಿ ರೂಢಿಸಿಕೊಳ್ಳಲಾರಂಭಿಸಿದ್ದಾರೆ. ಬದುವುಗಳ ಅಳತೆ ನೋಡಿ ಸರ್ಕಾರದಿಂದ ಸಹಾಯಧನ ನೀಡಲಾಗುತ್ತಿದೆ.

ಯೋಜನೆ ಬರದಿದ್ದರೂ ಪ್ರಗತಿ: ಕೇಂದ್ರದ ಅಟಲ್ ಭೂ ಜಲ್ ಯೋಜನೆ ರಾಜ್ಯದ 14 ಜಿಲ್ಲೆಗಳಲ್ಲಿ ಆರಂಭಿಸಲಾಗಿದ್ದು, ಧಾರವಾಡ ಜಿಲ್ಲೆಗೆ ಬಂದಿಲ್ಲ. ಆದರೂ ಇಲ್ಲಿ ಅಂತರ್ಜಲ ಹೆಚ್ಚಳ, ಬದುವು, ಕೃಷಿ ಹೊಂಡ ನಿರ್ವಣದಂತಹ ಅನೇಕ ಕಾರ್ಯಕ್ರಮಗಳು ಪ್ರಗತಿಯಲ್ಲಿವೆ.

ನರೇಗಾ ಯೋಜನೆ ಅಡಿ ಜಿಲ್ಲಾದ್ಯಂತ ಬಹಳಷ್ಟು ಕೆಲಸಗಳು ನಡೆಯುತ್ತಿವೆ. ರೈತರು ಅತ್ಯುತ್ಸಾಹ ತೋರುತ್ತಿರುವುದೇ ಇದಕ್ಕೆ ಕಾರಣ. ಪ್ರತಿಯೊಬ್ಬ ರೈತ ನರೇಗಾ ಯೋಜನೆ ಅಡಿ 2 ಲಕ್ಷ ರೂ.ವರೆಗೂ ಲಾಭ ಪಡೆಯಬಹುದು.-ಡಾ. ಬಿ.ಸಿ. ಸತೀಶ, ಧಾರವಾಡ ಜಿಪಂ ಸಿಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net