ಚಾಮರಾಜನಗರ: ತೋಟಗಾರಿಕೆ ಇಲಾಖೆಯಿಂದ 2025-26ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಕೃಷಿಹೊಂಡ ನಿರ್ಮಾಣಕ್ಕೆ ಸಹಾಯಧನ ನೀಡಲಾಗುವುದು.
ಕೃಷಿ ಹೊಂಡ ನಿರ್ಮಾಣಕ್ಕೆ ಉತ್ತೇಜನ ನೀಡಲಾಗುತ್ತಿದ್ದು, ಮಳೆಗಾಲದಲ್ಲಿ ಅಥವಾ ಆಯಾ ಭಾಗದಲ್ಲಿ ನೀರಿನ ಸೌಕರ್ಯ ಲಭ್ಯವಿದ್ದಲ್ಲಿ ಹೆಚ್ಚುವರಿ ನೀರನ್ನು ಸಂಗ್ರಹಣೆ ಮಾಡಿ ನಂತರ ಬೇಸಿಗೆ ಕಾಲದಲ್ಲಿ ಅಥವಾ ನೀರಿನ ಅಭಾವವಿರುವ ಸಂದರ್ಭದಲ್ಲಿ ತೋಟಗಾರಿಕೆ ಬೆಳೆಗಳಿಗೆ ನೀರಿನ ಸೌಕರ್ಯ ಕಲ್ಪಿಸುವುದು ಇಲಾಖೆಯ ಮುಖ್ಯ ಉದ್ದೇಶವಾಗಿದೆ.
ರೈತರು ಕನಿಷ್ಠ 1 ಹೆಕ್ಟೇರ್ ಜಮೀನು ಹೊಂದಿರಬೇಕು. 20*20*3 ಮೀ. ಅಳತೆಯ 1:1 ಇಳಿಜಾರಿರುಂತೆ ಕೃಷಿಹೊಂಡವನ್ನು ಕಡ್ಡಾಯವಾಗಿ ನಿರ್ಮಿಸಬೇಕು. (ಕೃಷಿ ಹೊಂಡದ ನೀರು ಶೇಖರಣಾ ಸಾಮರ್ಥ್ಯ 1200 ಘ.ಮೀ ಇರಬೇಕು). ತಳಭಾಗದಲ್ಲಿ ನೀರು ಇಂಗದಂತೆ ಕೃಷಿಹೊಂಡಕ್ಕೆ 300 ಮೈಕ್ರೋನ್ ಐಎಸ್‌ಐ ಗುಣಮಟ್ಟದ ಪಾಲಿಥಿನ್ ಹೊದಿಕೆಯನ್ನು ಇಲಾಖೆಯಿಂದ ಎಂಪೆನಲ್ ಆಗಿರುವ ಏಜೆನ್ಸಿ ಅವರಿಂದಲೇ ರೈತರು ಖರೀದಿಸಿ ಅಳವಡಿಸುವುದು ಕಡ್ಡಾಯವಾಗಿದೆ. ನೀರು ಸಂಗ್ರಹಣೆ ಒಳಹರಿವಿಗಾಗಿ ಹಾಗೂ ಹೆಚ್ಚುವರಿ ನೀರನ್ನು ಹೊರಹಾಕಲು ಔಟ್‌ಲೆಟ್ ನಿರ್ಮಾಣ ಮಾಡಬೇಕು. ನೀರಿನ ಪ್ರಾಮುಖ್ಯತೆಯನ್ನು ಅರಿತು ಕೃಷಿಹೊಂಡ ನಿರ್ಮಾಣಕ್ಕೆ ಯೋಜನೆಯಡಿ ಎಲ್ಲ ವಗರ್ದ ರೈತರಿಗೂ ಶೇ.50ರ ಸಹಾಯಧನ 75,000 ರೂ. ನೀಡಲಾಗುವುದು.
ಆಸಕ್ತ ರೈತರು ಅಗತ್ಯ ದಾಖಲಾತಿಗಳನ್ನು ನಿಗದಿತ ಅರ್ಜಿ ನಮೂನೆಯೊಂದಿಗೆ ಭಾವಚಿತ್ರ, ಪ್ರಸಕ್ತ ಸಾಲಿನ ಪಹಣಿ, ಕನಿಷ್ಠ 1 ಎಕರೆ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆದಿರಬೇಕು, ತಾಕಿನ ಫೋಟೋ, ಚೆಕ್‌ಬಂದಿ, ಕಂದಾಯ ಇಲಾಖೆಯಿಂದ ಗಣಕೀಕೃತ ಬೆಳೆ ದೃಢೀಕರಣ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ರೈತರಾದಲ್ಲಿ ಆರ್.ಡಿ. ಸಂಖ್ಯೆಯುಳ್ಳ ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್, ಕೃಷಿ ಇಲಾಖೆಯಿಂದ ಎನ್‌ಒಸಿ ಇನ್ನಿತರ ದಾಖಲೆಗಳನ್ನು ಆಯಾ ತಾಲೂಕಿನ ತೋಟಗಾರಿಕೆ ಇಲಾಖೆಗೆ ಸಲ್ಲಿಸುವಂತೆ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.