

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಭಾರತ ಇಂದು ಧಾನ್ಯಗಳ ಉತ್ಪಾದನೆಯಲ್ಲಿ ಕ್ರಾಂತಿಕಾರಿ ಬದಲಾವಣೆಯತ್ತ ಸಾಗುತ್ತಿದ್ದು, ದ್ವಿದಳ ಧಾನ್ಯಗಳಲ್ಲಿ ಸ್ವಾವಲಂಬಿಯಾಗಲು ಪ್ರಧಾನಮಂತ್ರಿ ಧನಧಾನ್ಯ ಕೃಷಿ ಯೋಜನೆ ಮೈಲಿಗಲ್ಲಾಗಲಿದೆ ಎಂದು ಕಾಸರಗೋಡು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಅಭಿಪ್ರಾಯಪಟ್ಟರು.
ಐಸಿಎಆರ್ ಸಿಪಿಸಿಆರ್‌ಐ ಮತ್ತು ಕೆವಿಕೆ ಕಾಸರಗೋಡು ವತಿಯಿಂದ ಇತ್ತೀಚೆಗೆ ಆಯೋಜನೆಗೊಂಡ ಪ್ರಧಾನಮಂತ್ರಿ ಧನಧಾನ್ಯ ಕೃಷಿ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ದೇಶಾದ್ಯಂತ 100 ಹಿಂದುಳಿದ ಜಿಲ್ಲೆಗಳನ್ನು ಯೋಜನೆಗಾಗಿ ಆಯ್ಕೆ ಮಾಡಲಾಗಿದ್ದು, ಕೇರಳದಲ್ಲಿ ಕಾಸರಗೋಡು ಸೇರಿ ಮೂರು ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ದ್ವಿದಳ ಧಾನ್ಯಗಳ ಬೆಳೆಯಲ್ಲಿ ಕಾಸರಗೋಡಿನ ಪರಪ್ಪ ಈಗಾಗಲೇ ಜಿಲ್ಲೆಗೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಮೆಚ್ಚುಗೆ ಸೂಚಿಸಿದರು.
ಐಸಿಎಆರ್ ಸಿಪಿಸಿಆರ್‌ಐ ನಿರ್ದೇಶಕ ಡಾ.ಕೆ. ಬಾಲಚಂದ್ರ ಹೆಬ್ಬಾರ್ ಅಧ್ಯಕ್ಷತೆ ವಹಿಸಿ, ಕಾಸರಗೋಡಿನ ಕೃಷಿ ವಲಯ ಅಭಿವೃದ್ಧಿಗೆ ಆರು ವರ್ಷ ಕಾಲಾವಧಿಯಲ್ಲಿ 42,000 ಕೋಟಿ ರೂ. ಮೊತ್ತದ 1100 ಯೋಜನೆ ರೂಪಿಸಲಾಗುವುದು ಎಂದರು.
ಪ್ರಮುಖರಾದ ಕೆ.ಮಣಿಕಂಠನ್ ಪ್ರೇಕ್ಷಕರಿಗೆ ಕಪ್ಪುಬೇಳೆ, ಹೆಸರುಬೇಳೆ, ಗೋವಿನಜೋಳ, ಕೆಂಪುಬೇಳೆ, ಹುರುಳಿಕಾಳು ಮುಂತಾದ ದ್ವಿದಳ ಧಾನ್ಯಗಳ ಮಹತ್ವದ ಬಗ್ಗೆ ವಿವರಿಸಿದರು. ಕಾಸರಗೋಡಿನ ಯೋಜನಾ ನಿರ್ದೇಶಕ ಆನಂದ ಅಲ್ಪಾವಧಿಯ ದ್ವಿದಳ ಧಾನ್ಯ ಬೆಳೆಗಳ ಬಗ್ಗೆ ಮಾಹಿತಿ ನೀಡಿದರು. ನೈಸರ್ಗಿಕ ಕೃಷಿ ಸಮುದಾಯದ ಮಾಸ್ಟರ್ ತರಬೇತುದಾರರಿಗೆ ಜಿಲ್ಲಾಧಿಕಾರಿಗಳು ಪ್ರಮಾಣಪತ್ರಗಳನ್ನು ವಿತರಿಸಿದರು. ಡಾ.ಬೆಂಜಮಿನ್ ಸ್ವಾಗತಿಸಿದರು. ಡಾ.ಪೊನ್ನುಸ್ವಾಮಿ ವಂದಿಸಿದರು.
ನೇರಪ್ರಸಾರ ಪ್ರದರ್ಶನ
ಕಾಸರಗೋಡಿನ ಪಿಎಒ ರಾಘವೇಂದ್ರ ಪಿಎಂಡಿಡಿಕೆವೈ ಕಾರ್ಯಕ್ರಮದ ಹಿನ್ನೆಲೆ, ಏಕೀಕರಣ ಮತ್ತು ಯೋಜನೆಗಳು, ಹನಿ ನೀರಾವರಿ, ಸಾಲ ಸೌಲಭ್ಯ, ಎಂಐಡಿಎಚ್ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು. ಬಳಿಕ ಪ್ರಧಾನಮಂತ್ರಿ ಧನಧಾನ್ಯ ಕೃಷಿ ಯೋಜನೆ ಉದ್ಘಾಟನೆ ಕಾರ್ಯಕ್ರಮದ ನೇರ ಪ್ರಸಾರ ಪ್ರದರ್ಶಿಸಲಾಯಿತು. 200 ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.