

ಬೆಂಗಳೂರು ಗ್ರಾಮಾಂತರ: ರೈತರಿಗೆ ಅನುಕೂಲವಾಗುವಂತೆ ರಸಗೊಬ್ಬರ, ಬಿತ್ತನೆ ಬೀಜ, ಕ್ರಿಮಿನಾಶಕ ಸೇರಿ ಕೃಷಿಗೆ ಸಂಬಂಧಿಸಿದಂತೆ ಇಲಾಖೆಯಿಂದ ದೊರಕುವ ವಿವಿಧ ಸೌಲಭ್ಯ ಹಾಗೂ ಪರಿಕರಗಳ ಕುರಿತು ರೈತರಲ್ಲಿ ಅರಿವು ಮೂಡಿಸಬೇಕು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.
ದೇವನಹಳ್ಳಿ ತಾಲೂಕು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೃಷಿ ಅಭಿಯಾನ ಸಮಿತಿ ಸಭೆಯಲ್ಲಿ ಮಾತನಾಡಿದರು. ಯಾವ ಬೆಳೆಯನ್ನು ಯಾವ ಋತುಮಾನದಲ್ಲಿ ಬಿತ್ತನೆ ಮಾಡಬೇಕು ಎಂಬುದರ ಮಾಹಿತಿ ನೀಡಬೇಕು. ಸದ್ಯ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರಿಗೆ ಅಗತ್ಯ ಮಾಹಿತಿ ನೀಡಬೇಕು. ರಸಗೊಬ್ಬರವನ್ನು ಎಷ್ಟು ವರ್ಷ ದಾಸ್ತಾನು ಮಾಡಬಹುದು ಎಂಬ ಬಗ್ಗೆ ತಿಳಿಸಬೇಕು ಎಂದರು.
ಪ್ರಕೃತಿ ವಿಕೋಪದಿಂದ ಬೆಳೆ ಹಾನಿಗೊಳಪಟ್ಟ ರೈತರು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಅರ್ಜಿ ಸಲ್ಲಿಸಿದರೆ, ಶೀಘ್ರವೇ ಪರಿಹಾರ ನೀಡಲಾಗುತ್ತದೆ ಎಂದರು.
ಪ್ರತಿ ಬೆಳೆಗಳಿಗೆ ಅನುಗುಣವಾಗಿ ಸಾಲ ಒದಗಿಸಲಾಗುತ್ತಿದ್ದು, ಹಾಗೆಯೇ ರೈತರು ವಿಮೆ ಮಾಡಿಸಲು ದಾಖಲೆಗಳನ್ನು ನೀಡಬೇಕು ಎಂದರು.
ಕಳಪೆಯಾದರೆ ಕ್ರಮ: ರೈತರಿಗೆ ಕಳಪೆ ರಸಗೊಬ್ಬರ ಮಾರಾಟ ಮಾಡುವ ರಸಗೊಬ್ಬರಗಳ ಮಾಲೀಕರ ವಿರುದ್ಧ ಮೊಕದ್ದಮೆ ಹೂಡಿ, ರೈತರಿಗೆ ಪರಿಹಾರಧನ ಒದಗಿಸುವ ಕಾರ್ಯವಾಗಬೇಕು. ಪರವಾನಿಗೆ ಇಲ್ಲದೆ ರಸಗೊಬ್ಬರ ಹಾಗೂ ಕ್ರಿಮಿನಾಶಕ ಮಾರಾಟ ಮಾಡುವ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಡಿಸಿ ಸೂಚನೆ ನೀಡಿದರು.
ರೈತರಿಗೆ ಅನುಕೂಲವಾಗುವ ಯೋಜನೆಗಳು, ಬ್ಯಾಂಕಿನ ಸಾಲ ಸೌಲಭ್ಯ, ರಸಗೊಬ್ಬರಗಳ ಬಗ್ಗೆ ಅರಿವು ಮೂಡಿಸಬೇಕು ರೈತರಿಗೆ ಉಪಯೋಗವಾಗುವ ಮಾಹಿತಿಗಳನ್ನು ಸ್ಥಳೀಯ ಮಟ್ಟದಲ್ಲಿ ಕರಪತ್ರ, ದೂರದರ್ಶನ ಹಾಗೂ ಪತ್ರಿಕೆಗಳಲ್ಲಿ ವ್ಯಾಪಕವಾಗಿ ಪ್ರಚಾರ ನೀಡಬೇಕು ಎಂದು ಸೂಚಿಸಿದರು.
ಹೆಚ್ಚಿನ ಉತ್ಪಾದನೆಗೆ ಆದ್ಯತೆ: ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ.ನಾಯಕ್ ಮಾತನಾಡಿ, ಕೃಷಿಯಲ್ಲಿ ಹೆಚ್ಚಿನ ಉತ್ಪಾದನೆಗೆ ಆದ್ಯತೆ ನೀಡಬೇಕು ಹಾಗೂ ರೈತರಿಗೆ ಕೃಷಿ ಅಭಿಯಾನದಡಿ ಕಾರ್ಯಕ್ರಮಗಳ ಕುರಿತುಅಗತ್ಯ ಪ್ರಚಾರ ಮಾಡಬೇಕು ಎಂದರು.
ರೈತರು ಹಾಗೂ ಕೃಷಿ ವಿಜ್ಞಾನಿಗಳ ಜತೆ ಸಂವಾದ ನಡೆಸಿ, ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು. ರೈತರಿಗೆಂದೇ ಕೃಷಿಗೆ ಸಂಬಂಧಿಸಿದಂತೆ ಹಲವು ತಂತ್ರಾಂಶಗಳಿದ್ದು ಈ ಅನುಕೂಲವನ್ನು ರೈತರು ಪಡೆಯುವಂತೆ ತಿಳಿಸಬೇಕು ಎಂದು ಹೇಳಿದರು.
ಮುಖ್ಯ ಬೆಳೆಗಳಾದ ರಾಗಿ, ತೊಗರಿ, ದ್ರಾಕ್ಷಿ, ಮಾವು ಮುಂತಾದ ಬೆಳೆಗಳಿಗೆ ಯಾವ ರೀತಿಯ ರಸಗೊಬ್ಬರ ಬಳಸಬೇಕೆಂದು ರೈತರಿಗೆ ತಿಳಿಸಿಕೊಡಬೇಕು ಹಾಗೂ ಕೃಷಿ ಅಭಿಯಾನದಡಿ ಇಲಾಖೆಗಳು ಪ್ರಚಾರ ಮಾಡಬೇಕು ಎಂದು ತಿಳಿಸಿದರು.