ಕೃಷಿ ಸಲಕರಣೆ ಮಾರಾಟಕ್ಕೆ ಮಾಲ್ ತೆರೆಯಿರಿ

8-klr-9
Published on

ಕೋಲಾರ: ಸೊಸೈಟಿಗಳಲ್ಲಿ ರೈತರಿಗೆ ಅಗತ್ಯವಿರುವ ಎಲ್ಲ ಕೃಷಿ ಸಂಬಂಧಿತ ಸಲಕರಣೆಗಳ ಮಾರಾಟಕ್ಕೆ ಮಾಲ್‌ಗಳನ್ನು ಸ್ಥಾಪಿಸಿ ದೇಶದಲ್ಲೇ ಹೊಸ ಪ್ರಯೋಗಕ್ಕೆ ಬುನಾದಿ ಹಾಕುವಂತೆ ಶಾಸಕ ಕೆ.ಆರ್.ರಮೇಶ್‌ಕುಮಾರ್ ಸಲಹೆ ನೀಡಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಶ್ರೀನಿವಾಸಪುರ ತಾಲೂಕಿನ ಎಲ್ಲ ಕೃಷಿಪತ್ತಿನ ಸಹಕಾರ ಸಂಘ(್ಯಾಕ್ಸ್)ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಟಿಎಪಿಸಿಎಂಎಸ್‌ಗಳು ಮಾಲ್ ತೆರೆದು ನೇರವಾಗಿ ಕಂಪನಿಗಳಿಂದ ಕೃಷಿ ಸಲಕರಣೆ, ಔಷಧ, ಕೀಟನಾಶಕ ತರಿಸಿ ರೈತರಿಗೆ ಮಾರಾಟ ಮಾಡಿ ಸುಲಿಗೆ ತಪ್ಪಿಸಬೇಕು ಎಂದು ಸೂಚಿಸಿದರು.

ಆರ್‌ಬಿಐನಿಂದ ಪರವಾನಗಿ ಪಡೆದ ಕೆಲ ಫೈನಾನ್ಸ್‌ಗಳು ಗೋಲ್ಡ್‌ಲೋನ್ ಸುಸ್ತಿದಾರರ ಅಂದಾಜು 3500 ಕೆಜಿ ಚಿನ್ನ ಹರಾಜು ಹಾಕಿವೆ. ರೈತ ಅಡವಿಟ್ಟಾಗ ಇದ್ದ ಚಿನ್ನದ ಬೆಲೆ ಹಾಗೂ ಈಗಿನ ಬೆಲೆಯಲ್ಲಿ ಶೇ.280ರಷ್ಟು ಬೆಲೆ ಏರಿಕೆಯಾಗಿದೆ. ಹೆಚ್ಚುವರಿ ಹಣವನ್ನು ರೈತರಿಗೆ ನೀಡುವುದಿಲ್ಲ. ಇದೊಂದು ಸಾವಿರಾರು ಕೋಟಿಗಳ ಹಗರಣ ಎಂದು ಟೀಕಿಸಿದರು.

ಶ್ರೀನಿವಾಸಪುರದ ಚಾಂಪಲ್ಲಿ, ರಾಯಲ್ಪಾಡು, ಅಡ್ಡಗಲ್ ಸೊಸೈಟಿಗಳು ಕ್ರಿಯಾಶೀಲವಾಗದಿರುವ ಬಗ್ಗೆ ಸೊಸೈಟಿಗಳ ಸಿಇಒಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಚಾಂಪಲ್ಲಿ ಸೊಸೈಟಿ ವ್ಯಾಪ್ತಿಯ ಗ್ರಾಮಗಳನ್ನು ರೋಣೂರು ಸೊಸೈಟಿಗೆ ಸೇರಿಸಲು ಸೂಚಿಸಿದರು. ಸುಗಟೂರು, ಅಣ್ಣಿಹಳ್ಳಿ ಸೊಸೈಟಿಗಳಲ್ಲಿ ತಲಾ 500 ಮಹಿಳಾ ಸ್ವ-ಸಹಾಯ ಸಂಘಗಳ ಸ್ಥಾಪನೆ ಹಾಗೂ 20 ಕೋಟಿಗೂ ಹೆಚ್ಚು ಸಾಲ ವಿತರಿಸಿ ಇತರ ಸೊಸೈಟಿಗಳಿಗೆ ಮಾದರಿಯಾಗಿದೆ ಎಂದರು.

ಸೊಸೈಟಿಗಳು ಡಿಸಿಸಿ ಬ್ಯಾಂಕಿಗೆ ಸಾಲದ ಪ್ರಸ್ತಾವನೆ ಸಲ್ಲಿಸಲು ರೈತರ ಜಮೀನು ಮಾರ್ಟ್‌ಗೇಜ್ ಮಾಡಿಕೊಡಲು ಸಬ್‌ರಿಜಿಸ್ಟ್ರಾರ್ ಕಚೇರಿಗಳಲ್ಲಿ ವಿಳಂಬವಾಗುತ್ತಿರುವ ದೂರಿಗೆ ಸ್ಪಂದಿಸಿದ ಶಾಸಕರು ಜು 12ರಂದು ತಹಸೀಲ್ದಾರ್, ಆರ್‌ಐ, ನೋಂದಣಾಧಿಕಾರಿಗಳ ಸಭೆ ಕರೆದು ಒಂದೇ ದಿನದಲ್ಲಿ ಈ ಕಾರ್ಯ ಮಾಡಿಕೊಡಲು ನಿರ್ದೇಶನ ನೀಡುವುದಾಗಿ ತಿಳಿಸಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಇ-ಶಕ್ತಿ ಅನುಷ್ಠಾನ ಹಾಗೂ ್ಯಾಕ್ಸ್‌ಗಳ ಗಣಕೀಕರಣಕ್ಕೆ ಸ್ಪಂದಿಸದ ಮಣಿಗಾನಹಳ್ಳಿ, ಮರಸನಪಲ್ಲಿ ವೇಂಪಲ್ಲಿ ಸೊಸೈಟಿಗಳ ಸಿಇಒಗಳು ಹಾಗೂ ಎಸ್‌ಎಸ್‌ಜಿಗಳ ರಚನೆ, ಗಣಕೀಕರಣ, ಸಾಲ ವಸೂಲಾತಿ, ಸಾಲ ವಿತರಣೆಗೆ ಪ್ರಸ್ತಾವನೆ ಸಲ್ಲಿಸುವಲ್ಲಿ ವಿಫಲವಾಗಿರುವ ಸೊಸೈಟಿಗಳ ಸಿಇಒಗಳನ್ನು ತರಾಟೆಗೆ ತೆಗೆದುಕೊಂಡು ಕೆಲಸ ಮಾಡುವುದಾದರೆ ಇರಿ, ಇಲ್ಲ ಹೊರಹೋಗಿ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ, ಎಂ.ಎಲ್.ಅನಿಲ್‌ಕುಮಾರ್, ವೆಂಕಟರೆಡ್ಡಿ, ಕೋಚಿಮುಲ್ ಮಾಜಿ ಅಧ್ಯಕ್ಷ ಬ್ಯಾಟಪ್ಪ, ಡಿಸಿಸಿ ಬ್ಯಾಂಕ್ ವೃತ್ತಿನಿರತ ನಿರ್ದೇಶಕ ಎಸ್.ವಿ.ಸುಧಾಕರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಬ್ಯಾಂಕ್ ಎಜಿಎಂ ಶಿವಕುಮಾರ್, ಎಸ್‌ಎಫ್‌ಸಿಎಸ್ ಅಧ್ಯಕ್ಷರಾದ ತಿಮ್ಮರಾಯಪ್ಪ, ಅಣ್ಣಿಹಳ್ಳಿ ನಾಗರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net