

ಹುಬ್ಬಳ್ಳಿ: ಮಹಾಮಾರಿ ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಲಾಕ್ಡೌನ್ ಹೇರಲಾಗಿದ್ದರೂ ಕೃಷಿ ಚಟುವಟಿಕೆ, ಕೃಷಿ ಸಂಬಂಧಿತ ವ್ಯಾಪಾರ ವಹಿವಾಟಿಗೆ ಕೆಲವು ನಿಬಂಧನೆಗಳೊಂದಿಗೆ ಸರ್ಕಾರ ಅನುಮತಿ ನೀಡಿದೆ. ಆದರೆ, ಕರೊನಾ ಹಳದಿ ವಲಯದಲ್ಲಿರುವ ಧಾರವಾಡ ಜಿಲ್ಲೆಯ ಅದರಲ್ಲೂ ಹುಬ್ಬಳ್ಳಿ ನಗರದಲ್ಲಿ ವ್ಯಾಪಾರ ವಹಿವಾಟು ಒಂದಿಷ್ಟು ಕಷ್ಟಕರವಾಗಿದೆ.
ಹಾಗಾಗಿ ವ್ಯಾಪಾರಕ್ಕೆ ಸಮಯ ನಿಗದಿ ಮಾಡಲಾಗಿದ್ದು, ಕೃಷಿ ಚಟುವಟಿಕೆಗೆ ಪೂರಕ ವಹಿವಾಟು ನಡೆಸಬಹುದಾಗಿದೆ. ಪ್ರತಿ ದಿನ ಬೆಳಗ್ಗೆ 9ರಿಂದ 12ರ ವರೆಗೆ ಮಾತ್ರ ಬೀಜ, ಗೊಬ್ಬರ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ ಎಂದು ಕೆಲ ಅಂಗಡಿಕಾರರು ಹೇಳುತ್ತಿದ್ದಾರೆ. ಹಾಗಾಗಿ ರೈತರು ಕೃಷಿ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗೆ ಬೇಕಾದ ಸಾಮಗ್ರಿಯನ್ನು ಈ ಸಮಯದಲ್ಲಿ ಪರವಾನಗಿ ಪಡೆದ ಅಂಗಡಿಗಳಿಗೆ ಭೇಟಿ ನೀಡಿ ಖರೀದಿಸಬಹುದಾಗಿದೆ.
ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಉಪಕರಣಗಳು, ನೀರಾವರಿಗೆ ಬೇಕಾದ ಸಲಕರಣೆಗಳು ಇತ್ಯಾದಿಗಳ ಅಂಗಡಿಗಳೇ ಹೆಚ್ಚಾಗಿರುವ ಇಲ್ಲಿಯ ನೀಲಿಜಿನ್ ರಸ್ತೆಯಲ್ಲಿ ಗುರುವಾರ ಮಧ್ಯಾಹ್ನ ಅಷ್ಟಾಗಿ ಜನಸಂದಣಿ ಕಂಡು ಬರಲಿಲ್ಲ. ರೈತರು ಬಾರದ ಹಿನ್ನೆಲೆಯಲ್ಲಿ ಅಂಗಡಿ ಬಾಗಿಲು ತೆರೆದಿಲ್ಲ ಎಂದು ದೂರವಾಣಿ ಕರೆ ಮಾಡಿದಾಗ ಕೆಲ ಅಂಗಡಿಕಾರರು ಹೇಳಿದರು.
ಒಂದು ವೇಳೆ ರೈತರು ಅಂಗಡಿಗೆ ಬಂದು ಫೋನ್ ಮಾಡಿದರೆ ಅವರಿಗೆ ಬೇಕಾದ ಸಲಕರಣೆಗಳನ್ನು ಕೊಡುತ್ತೇವೆ. ಇಲ್ಲದಿದ್ದರೆ ಅನಗತ್ಯವಾಗಿ ಅಂಗಡಿ ಬಾಗಿಲು ತೆರೆದು ಕುಳಿತುಕೊಳ್ಳುವುದಿಲ್ಲ ಎಂದೂ ಕೆಲವರು ಹೇಳಿದರು.
ಪರವಾನಗಿ ಪಡೆದ ರಸಗೊಬ್ಬರ, ಬೀಜ ಮಾರಾಟ ಮಳಿಗೆಗಳಿಗೆ ಮಾತ್ರ ಬೆಳಗ್ಗೆ 9ರಿಂದ 12ರ ವರೆಗೆ ವಹಿವಾಟು ನಡೆಸಲು ಸೂಚಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಸಾಮಾಜಿಕ ಅಂತರ ಅಗತ್ಯ: ಕಲಘಟಗಿ ತಾಲೂಕು ಪ್ರದೇಶದಲ್ಲಿ ಲಾಕ್ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಪಟ್ಟಣದ ಚಾವಡಿ ಕ್ರಾಸ್ ಬಳಿ ವ್ಯಾಪಾರಸ್ಥರೊಂದಿಗೆ ಸಭೆ ನಡೆಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದರು. ಕಲಘಟಗಿ ತಾಲೂಕಿನಲ್ಲಿ ವಾರದ 3 ದಿನ (ಶುಕ್ರವಾರ, ಶನಿವಾರ, ಭಾನುವಾರ) ಬೆಳಗ್ಗೆ 8 ರಿಂದ 12 ಗಂಟೆಯವರೆಗೆ ಹಾಗೂ ಇನ್ನುಳಿದ ದಿನ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ವ್ಯಾಪಾರಕ್ಕೆ ಅನುಮತಿಯನ್ನು ಕೊಡಲಾಗಿದೆ. ಜಿಲ್ಲಾಧಿಕಾರಿಗಳ ಆದೇಶವನ್ನು ಯಾರೂ ಉಲ್ಲಂಘನೆ ಮಾಡಬಾರದು ಎನ್ನುವುದಾಗಿ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು. ಕೆಲವು ವ್ಯಾಪಾರಸ್ಥರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಪಿಐ ವಿಜಯ ಬಿರಾದಾರ, ‘ಭಾಂಡೆ, ಬಂಗಾರ, ಬಟ್ಟೆ, ಟೇಲರಿಂಗ್, ಕ್ಷೌರಿಕ, ಫೋಟೋ ಸ್ಟುಡಿಯೋ ಮುಂತಾದವುಗಳಿಗೆ ಅನುಮತಿ ನೀಡಿರುವುದಿಲ್ಲ. ತಮಗೆ ಆ ವ್ಯವಹಾರವು ಜೀವನಾವಶ್ಯಕವಾಗಿದ್ದಲ್ಲಿ ಆ ಕುರಿತು ಮನವಿಯನ್ನು ನೀಡಿದರೆ ಮೇಲಧಿಕಾರಿಗಳ ಗಮನಕ್ಕೆ ತಂದು ಅವರ ನಿರ್ದೇಶನದನ್ವಯ ಕ್ರಮ ಜರುಗಿಸಲಾಗುವುದು’ ಎಂದರು. ಸಭೆಯಲ್ಲಿ ಎಎಸ್ಐ ಪಿ.ವೈ. ಕಾಳೆ, ಪೊಲೀಸ್ ಸಿಬ್ಬಂದಿ ಎನ್.ಎಂ. ಹೊನ್ನಪ್ಪನ್ನವರ, ಎಸ್. ಮಲ್ಲನಗೌಡರ, ಇತರರಿದ್ದರು.
ನಿಟ್ಟುಸಿರು ಬಿಟ್ಟ ಕುಂದಗೋಳ ಜನತೆ: ಲಾಕ್ಡೌನ್ ಸಡಿಲಿಕೆಯಿಂದ ಕುಂದಗೋಳ ಪಟ್ಟಣದಲ್ಲಿ ವಾರದಲ್ಲಿ ನಾಲ್ಕು ದಿನ ಅಂಗಡಿ-ಮುಂಗಟ್ಟುಗಳನ್ನು ತೆರೆಯಲು ಅನá-ಮತಿ ದೊರೆತಿದ್ದರಿಂದ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಗುರುವಾರ ಸ್ವಲ್ಪ ನಿಟ್ಟುಸಿರು ಬಿಟ್ಟಂತಾಗಿದೆ. ಸೋಮವಾರ, ಮಂಗಳವಾರ, ಬುಧವಾರ, ಗುರುವಾರ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಹಾಗೂ ಶುಕ್ರವಾರ, ಶನಿವಾರ, ಭಾನá-ವಾರ ಬೆಳಗ್ಗೆ 6ರಿಂದ 10ರವರೆಗೆ ವ್ಯಾಪಾರ ವಹಿವಾಟಿಗೆ ಅನುವು ಮಾಡಿಕೊಡಲಾಗಿದೆ. ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸಿಕೊಂಡು ವ್ಯವಹಾರ ಮಾಡಬೇಕು ಎಂದು ಪೊಲೀಸ್ ಇಲಾಖೆಯವರು ತಿಳಿಸಿದ್ದಾರೆ.
ರೈತರ ನೆರವಿಗೆ ಧಾವಿಸಲಿ: ಕರೊನಾ ಸೋಂಕು ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್ಡೌನ್ ಜಾರಿಯಾಗಿದ್ದು, ಜನಸಾಮಾನ್ಯರಂತೆ ರೈತರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ಆತ್ಮಹತ್ಯೆ ಹಾದಿ ತುಳಿಯುವ ಮುನ್ನವೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೆರವಿಗೆ ಧಾವಿಸಬೇಕು ಎಂದು ಕಾಂಗ್ರೆಸ್ ಮುಖಂಡ ಮುತ್ತಣ್ಣ ಶಿವಳ್ಳಿ ಒತ್ತಾಯಿಸಿದ್ದಾರೆ. ಬೆಳೆದ ಬೆಳೆಗಳು ಮನೆಯಲ್ಲಿಯೇ ಬಿದ್ದಿದ್ದು, ರೈತರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಮಾಡಿದ ಸಾಲ ತೀರಿಸದಂತಾಗಿದೆ. ಅಲ್ಲಲ್ಲಿ ಖರೀದಿ ಕೇಂದ್ರ ಆರಂಭಿಸಿ, ಬೆಂಬಲ ಬೆಲೆಯಲ್ಲಿ ಹತ್ತಿ, ಗೋವಿನ ಜೋಳ ಖರೀದಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಅತಿವೃಷ್ಟಿ ಹಾಗೂ ಲಾಕ್ಡೌನ್ನಿಂದಾಗಿ ಕುಂದಗೋಳ, ಹುಬ್ಬಳ್ಳಿ ತಾಲೂಕಿನ ಹಲವಾರು ಹಳ್ಳಿಗಳ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲಾಡಳಿತ ಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ವರದಿ ಕಳುಹಿಸಬೇಕು. ರಾಜ್ಯ ಸರ್ಕಾರ ಕೂಡಲೆ ಪರಿಹಾರ ಧನ ವಿತರಿಸಿ ರೈತರ ಕಣ್ಣೀರು ಒರೆಸಬೇಕು. ಇಲ್ಲವಾದಲ್ಲಿ ರೈತರೊಂದಿಗೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ: ಲಾಕ್ಡೌನ್ ಸಡಿಲಿಕೆ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಅಮರೇಶ ಪಮ್ಮಾರ ಹೇಳಿದರು. ಅಳ್ನಾವರದಲ್ಲಿ ಗುರುವಾರ ಏರ್ಪಡಿಸಿದ್ದ ವರ್ತಕರು, ಹೋಟೆಲ್ ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು, ದಿನಸಿ ಸಹಿತ ಅತ್ಯವಶ್ಯಕ ವಸ್ತುಗಳು, ಕಟ್ಟಡ ನಿರ್ವಣದ ಸಲಕರಣೆಗಳ ಅಂಗಡಿಗಳಲ್ಲಿ ವಾರದಲ್ಲಿ 4 ದಿನ ವ್ಯಾಪಾರ ನಡೆಸಬೇಕು. ಹೋಟೆಲ್ಗಳಲ್ಲಿ ತಿಂಡಿ-ತಿನಿಸುಗಳನ್ನು ಪಾರ್ಸೆಲ್ ಮಾತ್ರ ನೀಡಬಹುದು. ಹೊರಪ್ರದೇಶದಿಂದ ಬಂಧು-ಬಳಗದವರನ್ನು ಕರೆತರಬಾರದು ಎಂದರು. ಪಿಎಸ್ಐ ಎಸ್.ಆರ್. ಕಣವಿ ಮಾತನಾಡಿ, ಬೇರೆಡೆಯಿಂದ ಆಗಮಿಸುವವರ ಬಗ್ಗೆ ಸ್ಥಳೀಯರು ಮಾಹಿತಿ ನೀಡಬೇಕು ಎಂದರು. ಪಪಂ ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ, ಸಭೆಯಲ್ಲಿ ಪಟ್ಟಣದ ಎಲ್ಲ ವ್ಯಾಪಾರಸ್ಥರು ಇದ್ದರು.
ಜಪ್ತಿಯಾಗಿದ್ದ ವಾಹನಗಳ ಬಿಡುಗಡೆ: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಲಾಕ್ಡೌನ್ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ರಸ್ತೆಗೆ ಇಳಿದಿದ್ದ ವಾಹನಗಳನ್ನು ಜಪ್ತಿ ಮಾಡಿದ್ದ ಪೊಲೀಸ್ ಇಲಾಖೆ ಇದೀಗ ಆ ವಾಹನಗಳ ಬಿಡುಗಡೆ ಮಾಡಲು ಮುಂದಾಗಿದೆ. ವಾಹನಗಳ ಮಾಲೀಕರು 100 ರೂ. ಇಂಡೆಮ್ನಿಟಿ ಬಾಂಡ್ ಅನ್ನು ಸಂಬಂಧಪಟ್ಟ ಠಾಣೆಗೆ ನೀಡಿ ತಕ್ಷಣ ತಮ್ಮ ವಾಹನ ಬಿಡಿಸಿಕೊಂಡು ಹೋಗಬಹುದು. ಸಾರ್ವಜನಿಕರು ಮತ್ತೆ ಲಾಕ್ಡೌನ್ ನಿಯಮ ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.