

ಕೊಡೇಕಲ್: ಕೃಷಿ ಇಲಾಖೆ ರೈತರಿಗೆ ಅನುಕೂಲವಾಗಲಿ ಎಂದು ವಿವಿಧ ಯೋಜನೆ ಜಾರಿಗೆ ತಂದಿದ್ದು ರೈತರು ಅವುಗಳ ಲಾಭ ಪಡೆದುಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಂಗನಾಥ ದೋರಿ ಹೇಳಿದರು.
ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡ ತಾಡಪಾಲ ವಿತರಣೆಯ ಫಲಾನುಭವಿಗಳ ಆಯ್ಕೆ ಕರ‍್ಯಕ್ರಮದಲ್ಲಿ ಮಾತನಾಡಿದ ಅವರು, ಇಲಾಖೆಯಿಂದ ಉತ್ತಮ ಗುಣಮಟ್ಟದ ಕೃಷಿ ಸಲಕರಣೆಗಳು ಸಬ್ಸಿಡಿ ದರದಲ್ಲಿ ನೀಡುತ್ತಿದ್ದು ಅವುಗಳ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಹಿಂದೆ ಕೇವಲ ಬಿತ್ತನೆ ಬೀಜ ಮಾತ್ರ ವಿತರಿಸಲು ಮಾತ್ರ ಸಿಮೀತವಾಗಿದ್ದ ರೈತ ಸಂಪರ್ಕ ಕೇಂದ್ರ. ಇಂದು ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆ ಮಾಡುವ ಮೂಲಕ ರೈತರಿಗೆ ಸಬ್ಸಿಡಿ ದರಗಳಲ್ಲಿ ಕೃಷಿಗೆ ಪೂರಕವಾಗುವ ಸಲಕರಣೆ ವಿತರಣೆ ಮಾಡಲಾಗುತ್ತಿದೆ. ಅದರಲ್ಲೂ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ವರ್ಗದ ರೈತರಿಗೆ ವಿಶೇಷ ರೀಯಾಯತಿ ನೀಡಲಾಗಿದೆ. ರೈತರು ತಾಡಪಾಲ, ಕ್ರೀಮಿನಾಶಕ ಸಿಂಪಡಣೆ ಯಂತ್ರ, ಸ್ಪಿಂಕ್ಲರ್, ಬೀಜ, ಗೊಬ್ಬರ, ಕ್ರಿಮಿನಾಶಕ, ಕೂರಿಗೆ, ಎಡೆಕುಂಟೆ ಸೇರಿ ಹಲವು ಕೃಷಿಗೆ ಪೂರಕವಾಗುವಂತಹ ಸಲಕರಣೆ ಪಡೆದುಕೊಳ್ಳಬಹುದು ಎಂದರು.
ಕೃಷಿ ಅಧಿಕಾರಿ ರಾಮನಗೌಡ ಮಾಲಿಪಾಟೀಲ ಮಾತನಾಡಿ, ಸೋಮವಾರದಿಂದ ತಾಡಪಾಲ ವಿತರಣೆ ಮಾಡಲಾಗುವುದು ಎಂದರು. ಗ್ರಾಪಂ ಅಧ್ಯಕ್ಷ ಶಿವಶರಣ ಕುಂಬಾರ ಚೀಟಿ ಎತ್ತುವ ಮೂಲಕ ಫಲಾನುಭವಿಗಳ ಲಾಟರಿ ಆಯ್ಕೆಗೆ ಚಾಲನೆ ನೀಡಿದರು. ಸಹಾಯಕ ಕೃಷಿ ಅಧಿಕಾರಿ ಮಹಾನಂದಿ, ನೀರು ಬಳೆದಾರ ಸಂಘದ ಅಧ್ಯಕ್ಷ ಷಣ್ಮುಖಪ್ಪ ಡೊಣ್ಣಿಗೇರಿ,ವೀರಸಂಗಪ್ಪ ಅಂಬ್ಲಿಹಾಳ,ಮಹಿಮಪ್ಪ ಸೊನ್ನಾಪೂರ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ರಾಜಶೇಖರ, ಲೆಕ್ಕ ಸಹಾಯಕ ರವಿ ಸೇರಿದಂತೆ ರೈತ ಅನುವುಗಾರರು ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು ಉಪಸ್ಥಿತರಿದ್ದ ಕರ‍್ಯಕ್ರಮವನ್ನು ರಾಜಶೇಖರ ನಿರೂಪಣೆ ಮಾಡಿದರು, ಹಣಮಂತ ರಾಮಣ್ಣೋರ ಸ್ವಾಗತಿಸಿದರು, ಕಾಶಿರಾಂ ವಂದಿಸಿದರು.