ಕೃಷಿ ಯಂತ್ರಗಳ ಬಾಡಿಗೆ ದರ ಏರಿಕೆ

30 Budikote 1 ulume karya
Published on

ಬೂದಿಕೋಟೆ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಬಿಸಿ ಕೃಷಿ ಕ್ಷೇತ್ರಕ್ಕೂ ತಟ್ಟಿದ್ದು, ಕೃಷಿ ಯಂತ್ರೋಪಕರಣಗಳ ಬಾಡಿಗೆ ಗಣನೀಯವಾಗಿ ಏರಿಕೆಯಾಗಿದೆ. ಈಗಾಗಲೆ ಕರೊನಾದಿಂದ ಆರ್ಥಿಕ ಸಂಕಷ್ಟದಲ್ಲಿರುವ ಅನ್ನದಾತರಿಗೆ ಬಾಡಿಗೆ ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಜಿಲ್ಲೆಯಲ್ಲಿ ಈ ಬಾರಿ ಸಕಾಲಕ್ಕೆ ಉತ್ತಮ ಮಳೆಯಾಗುತ್ತಿರುವುದರಿಂದ ರೈತರು ಕರೊನಾ ಆರ್ಥಿಕ ಸಂಕಷ್ಟದಲ್ಲಿದ್ದರೂ ಸಾಲ ಮಾಡಿ ಬಿತ್ತನೆ ಬೀಜ, ಗೊಬ್ಬರ ಖರೀದಿ ಮಾಡುತ್ತಿದ್ದಾರೆ. ಆದರೆ ಇಂದಿನ ದಿನಗಳಲ್ಲಿ ರೈತರು ಬೇಸಾಯಕ್ಕೆ ಆಧುನಿಕ ಕೃಷಿ ಯಂತ್ರಗಳನ್ನೇ ಹೆಚ್ಚು ಅವಲಂಬಿಸಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಯಂತ್ರಗಳ ಬಾಡಿಗೆ ಸಹ ಗಗನಕ್ಕೇರಿದೆ.

ಜಿಲ್ಲೆಯಲ್ಲಿ ಈಗಾಗಲೆ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಭರದಿಂದ ಸಾಗಿದ್ದು, ರೈತರು ರಾಗಿ, ನೆಲಗಡಲೆ ಇತ್ಯಾದಿ ದಾನ್ಯಗಳ ಬಿತ್ತನೆಗೆ ಮುಂದಾಗಿದ್ದಾರೆ. ಕೃಷಿ ಯಂತ್ರೋಪಕರಣಗಳಿಗೆ ಬೇಡಿಕೆ ಸಹ ಹೆಚ್ಚಾಗಿದೆ. ತೈಲಗಳ ದರ ಏರಿಕೆಯಾಗುತ್ತಿರುವ ಬೆನ್ನಲ್ಲೇ ನಷ್ಟದಿಂದ ತಪ್ಪಿಸಿಕೊಳ್ಳಲು ಕೃಷಿಗೆ ಅವಶ್ಯಕವಾಗಿ ಬೇಕಾಗಿರುವ ಕಲ್ಟಿವೇಟರ್, ರೋಟೋವೇಟರ್, ಹಲುಬೆ, ಒಂಟಿ ನೇಗಿಲು ಸೇರಿ ಇತ್ಯಾದಿ ಯಂತ್ರಗಳ ಬಾಡಿಗೆಯನ್ನು ಮಾಲೀಕರು ಹೆಚ್ಚಿಸಿದ್ದಾರೆ. ಬಾಡಿಗೆ ಏರಿಕೆಯಿಂದ ಮಧ್ಯಮ, ಸಣ್ಣ ಹಾಗೂ ಅತಿ ಸಣ್ಣ ರೈತರು ದುಪ್ಪಟ್ಟು ಬಾಡಿಗೆ ನೀಡಿ ಕೃಷಿ ಚಟುವಟಿಕೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.

ಸಕಾಲಕ್ಕೆ ಸಿಗುತ್ತಿಲ್ಲ ಯಂತ್ರ: ಸರ್ಕಾರದ ಸಹಭಾಗಿತ್ವದಲ್ಲಿ ನಡೆಯುವ ಕೃಷಿ ಯಂತ್ರಧಾರೆಗಳಲ್ಲಿ ಕೃಷಿ ಯಂತ್ರಗಳ ಬಾಡಿಗೆ ಖಾಸಗಿಯವರಿಗಿಂತ ತುಸು ಕಡಿಮೆ. ಆದರೆ ಹೋಬಳಿಗೆ ಒಂದೇ ಒಂದು ಕೃಷಿ ಯಂತ್ರಧಾರೆ ಇರುವ ಕಾರಣ ಬೇಡಿಕೆ ಹೆಚ್ಚಾಗಿ ಸಕಾಲಕ್ಕೆ ಯಂತ್ರ ಸಿಗುತ್ತಿಲ್ಲ. ಆದ್ದರಿಂದ ರೈತರು ವಿಧಿಯಿಲ್ಲದೆ ಖಾಸಗಿಯವರಿಗೆ ಹೆಚ್ಚಿನ ಬೆಲೆ ನೀಡಿ ಯಂತ್ರ ಬಾಡಿಗೆಗೆ ಪಡೆದು ವ್ಯವಸಾಯ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ಕೃಷಿ ಕ್ಷೇತ್ರ ಸಮಸ್ಯೆ ಎದುರಿಸುವಂತಾಗಿದೆ. ಇಂದಿನ ಆಧುಕಿನ ಕೃಷಿ ಪದ್ಧತಿಯಲ್ಲಿ ಬಹುತೇಕ ರೈತರು ಯಂತ್ರೋಪಕರಣಗಳನ್ನೇ ಅವಲಂಭಿಸಿದ್ದಾರೆ. ದಿನದಿಂದ ದಿನಕ್ಕೆ ತೈಲ ಬೆಲೆ ಏರಿಕೆಯಾಗುತ್ತಿರುವುದರಿಂದ ಬಾಡಿಗೆಗೆ ಯಂತ್ರ ಪಡೆದು ಕೃಷಿ ಮಾಡುವುದು ರೈತರಿಗೆ ದೊಡ್ಡ ಸವಾಲಾಗಿದೆ. ಮಂಜುನಾಥ, ರೈತ ಬೂದಿಕೋಟೆ ಸರ್ಕಾರದಿಂದ ತೆರೆಯಲಾಗಿರುವ ಕೃಷಿ ಯಂತ್ರಧಾರೆಗಳಲ್ಲಿ ಕೃಷಿಗೆ ಬೇಕಾದ ಆಧುನಿಕ ಯಂತ್ರೋಪಕರಣ ಕಡಿಮೆ ದರದಲ್ಲಿ ಬಾಡಿಗೆಗೆ ದೊರೆಯುತ್ತವೆ. ಖಾಸಗಿಯವರ ಬಳಿ ಹೆಚ್ಚಿನ ಬೆಲೆಗೆ ಯಂತ್ರ ಪಡೆಯುವ ಬದಲು ರೈತರು ಸ್ವಲ್ಪ ತಡವಾದರೂ ಕೃಷಿಯಂತ್ರಧಾರೆಗಳಲ್ಲಿ ಯಂತ್ರಗಳನ್ನು ಬಾಡಿಗೆಗೆ ಪಡೆಯಲಿ. ಇದರಿಂದ ಹಣ ಉಳಿತಾಯವಾಗುತ್ತದೆ. ಅಸೀಪುಲ್ಲಾ, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ ಬಂಗಾರಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net