ಕೃಷಿ ಮಾರುಕಟ್ಟೆ ನೀತಿಯನ್ನು ಕಳ್ಳದಾರಿಯಲ್ಲಿ ಜಾರಿಗೆ ಹುನ್ನಾರ

mysore
Published on

ಮೈಸೂರು: ರೈತ ವಿರೋಧಿಯ 3 ಕಾಯ್ದೆಯ ತದ್ರೂಪಿಯಾಗಿರುವ ಕೃಷಿ ಮಾರುಕಟ್ಟೆ ನೀತಿಯನ್ನು ಕೇಂದ್ರ ಸರ್ಕಾರವು ಕಳ್ಳದಾರಿಯಲ್ಲಿ ಜಾರಿಗೆ ಹುನ್ನಾರ ನಡೆಸಿದೆ. ವಾಪಸ್ ಪಡೆದಿರುವ ಈ ಮೂರು ಕಾಯ್ದೆಗಳ ಮರುಜನ್ಮ ಇದಾಗಿದೆ. ಈ ನೀತಿಯಿಂದ ರೈತರು, ಹಳ್ಳಿಗಳು ನಾಶವಾಗಲಿವೆ. ಇಡೀ ಕೃಷಿ ಕ್ಷೇತ್ರವು ಕಾರ್ಪೋರೇಟ್ ಕೈಗೆ ಕೊಡುವ ಷಡ್ಯಂತ್ರವಾಗಿದೆ ಎಂದುರೈತ ಸಂಯುಕ್ತ ಮೋರ್ಚಾದ ರಾಷ್ಟ್ರೀಯ ಸಂಚಾಲಕ, ಸಮಾಜವಾದಿ ಚಿಂತಕ ಸುನೀಲಂ  ಕಿಡಿಕಾರಿದರು.

ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಪುರಭವನದಲ್ಲಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಪ್ರೊ.ಎಂ.ಡಿ.ನಂಜುಂಡಸ್ವಾಮಿ-89 ನೆನಪು ಮತ್ತು ಜಿಲ್ಲಾ ರೈತ ಸಮಾವೇಶದಲ್ಲಿ ಮಾತನಾಡಿದರು

ವಾಪಸ್ ಪಡೆದಿರುವ 3 ಕೃಷಿ ಕಾಯ್ದೆಗಳನ್ನು ಜಾರಿ ವಿವೇಚನೆಯನ್ನು ಇದೀಗ ಆಯಾ ರಾಜ್ಯ ಸರ್ಕಾರಗಳಿಗೆ ಬಿಡಲಾಗಿದೆ. ಬಿಜೆಪಿ ಅಧಿಕಾರದಲ್ಲಿರುವ ಸರ್ಕಾರಗಳು ಇದಕ್ಕೆ ಸಮ್ಮತಿ ಸೂಚಿಸಿವೆ. ಕೇರಳ, ಪಂಜಾಬ್ ಸರ್ಕಾರಗಳು ಮಾತ್ರ ವಿರೋಧಿಸಿವೆ. ಕರ್ನಾಟಕ ಸರ್ಕಾರ ಸಹ ಇದನ್ನು ವಿರೋಧಿಸಿ, ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.

ಮಂಡಿ, ಎಪಿಎಂಪಿ ಮಾರುಕಟ್ಟೆಗಳನ್ನು ನಾಶಪಡಿಸುವ ಮೂಲಕ ಕೃಷಿ ಬೆಂಬಲ ಬೆಲೆ ಯೋಜನೆ(ಎಂಎಸ್‌ಪಿ) ತನ್ನಷ್ಟ ತಾನೇ ನಾಶ ಮಾಡಲು ಕೇಂದ್ರ ಸರ್ಕಾರವು ಮುಂದಾಗಿದೆ. ಇದು ರೈತರ ಪ್ರಶ್ನೆಯಲ್ಲ. ಇದು ಇಡೀ ದೇಶದ ಪ್ರಜೆಗಳ ವಿಷಯ. ಇದರಿಂದ ಆಹಾರ ಭದ್ರತೆಗೆ ಪೆಟ್ಟುಬೀಳಲಿದೆ. ಕೃಷಿ ಭೂಮಿಯನ್ನು ಉಳಿಸಿಕೊಳ್ಳದಿದ್ದರೆ ರೈತರು, ಕೃಷಿ, ಹಳ್ಳಿ ಬದುಕು ಸಹ ಉಳಿಯಲ್ಲ ಎಂದು ಎಚ್ಚರಿಸಿದರು.

ಗುತ್ತಿಗೆ ಕೃಷಿ ನೀತಿಯನ್ನು ಹಿಂಬಾಗಿಲ ಮೂಲಕ ಜಾರಿಗೆ ತರಲಾಗುತ್ತಿದೆ. ಅಂಬಾನಿ, ಅದಾನಿಗೆ ಕೃಷಿ ಜಮೀನು ಹಸ್ತಾಂತರಕ್ಕೆ ವೇದಿಕೆ ಸೃಷ್ಟಿಸಲಾಗುತ್ತಿದೆ.

ದೇಶದ ಶೇ.75ರಷ್ಟು ಜನರು ಅವಲಂಬಿಸಿರುವ ಕೃಷಿಗೆ ಶೇ.2.50 ರಷ್ಟು ಹಣವನ್ನು ಕೇಂದ್ರ ಬಜೆಟ್‌ನಲ್ಲಿ ನೀಡಲಾಗಿದೆ. ಅದೇ ಕಾರ್ಪೋರೇಟ್ ಕ್ಷೇತ್ರಕ್ಕೆ 17 ಲಕ್ಷ ಕೋಟಿ ರೂ.ತೆರಿಗೆ ವಿನಾಯಿತಿ ನೀಡಲಾಗಿದೆ ಎಂದು ಕಿಡಿಕಾರಿದರು.

ಶಾಸಕ ಬಿ.ಆರ್.ಪಾಟೀಲ ಮಾತನಾಡಿ, ನಾನು ಮತ್ತು ದರ್ಶನ್ ಪುಟ್ಟಣ್ಣಯ್ಯ ಸದನದಲ್ಲಿ ರೈತ ಪರವಾಗಿ ದನಿ ಎತ್ತುತ್ತೇವೆ. ದೇಶದಲ್ಲಿ ರೈತ ಚಳವಳಿ ದೊಡ್ಡ ಪ್ರಮಾಣದಲ್ಲಿ ನಡೆಯಿತು. 13 ತಿಂಗಳು ನಡೆಯಿತು. ಐತಿಹಾಸಿಕ ಚಳವಳಿ ಮಣಿದು ಮೂರು ಮಸೂದೆಗಳನ್ನು ವಾಪಸ್ ಪಡೆಯಿತು. ಹಿಂದೆ ನಂಜುಂಡಸ್ವಾಮಿ ದನಿ ಎತ್ತಿದರೆ ವಿಧಾನಸೌಧ ನಡುಗುತ್ತಿತ್ತು ಎಂದು ಸ್ಮರಿಸಿದರು

ಕೃಷಿ ವಿಜ್ಞಾನಿ ಪ್ರಕಾಶ್ ಕಮ್ಮರಡಿ ಮಾತನಾಡಿ, ಆಂತರಿಕ ಪ್ರಜಾಪ್ರಭುತ್ವ ಹಾಗೂ ಹಣಕಾಸಿನ ಶಿಸ್ತು ರೈತ ಸಂಘದಲ್ಲಿ ಬರಬೇಕು. ಮಹಿಳೆಯರು, ಯುವಕರನ್ನು ಹೆಚ್ಚು ಒಳಗೊಳ್ಳಬೇಕು. ಅಧ್ಯಯನ ಶಿಬಿರ ನಿರಂತರವಾಗಿ ಹಳ್ಳಿಗಳಲ್ಲಿ ನಡೆಸಬೇಕು ಎಂದು ಸಲಹೆ ನೀಡಿದರು

ಕೃಷಿ ಬೆಳೆಗೆ ಬೆಂಬಲ ಬೆಲೆಯನ್ನು ನೀಡಬೇಕು. ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಬೇಕು. ಹೀಗಾಗಿ, ರೈತ ಸಂಘಟನೆಗಳು ಚಾಣಕ್ಯ ನಡೆ ಅನುಸರಿಸಬೇಕು. ಎಲ್ಲ ರೈತ ಬಣಗಳೂ ಒಗ್ಗಟ್ಟಾಗಬೇಕು ಎಂದರು.

ಹೊಸತನದೊಂದಿಗೆ ಹಳ್ಳಿ–ಹಳ್ಳಿಗಳಿಗೆ ರೈತ ಸಂಘ ಕಿರು ಹೊತ್ತಗೆಯನ್ನು ಸಂಘದ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ, ಸಂಘದ ಸಂವಿಧಾನದ ಕೃತಿಯನ್ನು ಎ.ಎಂ.ಮಹೇಶ್‌ಪ್ರಭು ಬಿಡುಗಡೆ ಮಾಡಿದರು. ಉಪಾಧ್ಯಕ್ಷ ಎ.ಎಲ್.ಕೆಂಪೂಗೌಡ ಸಂಘದ ಹೊಸ ಮಾದರಿ ಬೋರ್ಡ್ ಅನಾವರಣಗೊಳಿಸಿದರು. ಖೋಖೋ ವಿಶ್ವಕಪ್ ವಿಜೇತ ಮಹಿಳಾ ತಂಡದ ಆಟಗಾರ್ತಿ ಕುರುಬೂರಿನ ಬಿ.ಚೈತ್ರಾ ಅವರನ್ನು ಸನ್ಮಾನಿಸಲಾಯಿತು.

ಸರ್ವೋದಯ ಕರ್ನಾಟಕದ ರಾಜ್ಯ ಘಟಕದ ಅಧ್ಯಕ್ಷ ಚಾಮರಸ ಮಾಲೀ ಪಾಟೀಲ, ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಉಪಾಧ್ಯಕ್ಷೆ ಮಂಜುಳಾ ಅಕ್ಕಿ, ಪ್ರಧಾನ ಕಾರ್ಯದರ್ಶಿ ಎನ್.ಡಿ.ವಸಂತಕುಮಾರ್, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಹೊಸಕೋಟೆ ಬಸವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಮರಂಕಯ್ಯ, ಜಾಗೃತ ಕರ್ನಾಟಕದ ವಾಸು, ವಿವಿಧ ಸಂಘಟನೆಗಳ ಮುಖಂಡರಾದ ಗುರುಪ್ರಸಾದ್ ಕೆರಗೋಡು, ಉಗ್ರನರಸಿಂಹೇಗೌಡ, ಬೆಟ್ಟಯ್ಯ ಕೋಟೆ, ಅಹಿಂದ ಜವರಪ್ಪ, ಪುರುಷೋತ್ತಮ್, ನೂರ್ ಶ್ರೀಧರ್, ಯದುಶೈಲ ಸಂಪತ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net