ಕೃಷಿ ಮಸೂದೆ ಹಿಂಪಡೆಯಲು ಆಗ್ರಹ- ಎಐಕೆಎಸ್‌ ಮನವಿ ಸಲ್ಲಿಕೆ

aiks.jpg
Published on

ದಾವಣಗೆರೆ: ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ್ದ ಭರವಸೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾ ಮಂಡಳಿಯು ತಹಸೀಲ್ದಾರ್ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿತು. ನಂತರ ಅಲ್ಲಿನ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.

ಜಿಲ್ಲಾ ಮಂಡಳಿ ಮುಖಂಡ ಆವರಗೆರೆ ಎಚ್.ಜಿ.ಉಮೇಶ್ ಮಾತನಾಡಿ ರೈತರಿಗೆ ಮಾರಕವಾದ ಮೂರು ಕೃಷಿ ಮಸೂದೆಗಳನ್ನು ಹಿಂಪಡೆಯಲು ಅಗತ್ಯ ಸುಗ್ರೀವಾಜ್ಞೆ ಹೊರಡಿಸಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, ಬಳಕೆ ಮಿತಿ ಹೇರಿಕೆ ಮಾಡಬೇಕು. ಕೃಷಿಗೆ ಬಡ್ಡಿ ರಹಿತ ಸಾಲ ನೀಡಬೇಕು. ಬೆಂಬಲ ಬೆಲೆ ಮಾರುಕಟ್ಟೆ ವಿಸ್ತರಣೆಯಂತಹ ಭರವಸೆಗಳನ್ನು ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ಆದೇಶ ಹೊರಡಿಸಬೇಕೆಂದು ಆಗ್ರಹಿಸಿದರು.

ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡಿಕೊಂಡಿರುವ ಭೂರಹಿತ ಸಾಗುವಳಿದಾರರಿಗೆ ಬಗರ್‌ಹುಕುಂ ಸಾಗುವಳಿ ಚೀಟಿ ನೀಡಬೇಕು. ರಾಜ್ಯದ ಸಣ್ಣ, ಅತಿಸಣ್ಣ ರೈತರು, ಕೃಷಿ ಕಾರ್ಮಿಕರು, ಕುಶಲ ಕಾರ್ಮಿಕರಿಗೆ ನಿವೇಶನ, ವಸತಿ ಸಮಸ್ಯೆಯನ್ನು ಆದ್ಯತೆ ಮೇರೆಗೆ ಬಗೆಹರಿಸಲು ನೀತಿ ರೂಪಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಕಬ್ಬು, ಹತ್ತಿ, ತೊಗರಿ, ದಾಳಿಂಬೆ, ದ್ರಾಕ್ಷಿ, ಕಾಫಿ, ಕಾಳು ಮೆಣಸು, ಭತ್ತ, ರಾಗಿ, ಜೋಳ, ತರಕಾರಿ ಬೆಳೆಗಾರ ರೈತರಿಗೆ ಬೆಲೆ ಹಾಗೂ ಬೆಳೆ ನಷ್ಟದ ಸಂದರ್ಭದಲ್ಲಿ ಹವಾಮಾನ ವೈಪರಿತ್ಯ ಏರಿಳಿತದಂತಹ ವಿಶೇಷ ತೊಂದರೆಗಳ ಬಗ್ಗೆ ಚರ್ಚಿಸಿ ಪರಿಹಾರ ನೀಡಬೇಕು. ಈ ಬಗ್ಗೆ ಜಿಲ್ಲಾ ಸಚಿವರು ಜಿಲ್ಲಾ ಮಟ್ಟದ ಸಭೆ ನಡೆಸಬೇಕೆಂದರು.

ಅಪೂರ್ಣ ನೀರಾವರಿ ಯೋಜನೆಗಳ ಕಡೆ ಗಮನ ಹರಿಸಬೇಕು. ತೋಟಗಾರಿಕೆ ಬೆಳೆಗಳಿಗೆ ಮಾರುಕಟ್ಟೆ ಸ್ಥಿರೀಕರಣ ನಿಧಿ ಮೀಸಲಿಡಬೇಕು. ಅಲ್ಲದೇ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಸೇರಿ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಐರಣಿ ಚಂದ್ರು, ಭೀಮಾರೆಡ್ಡಿ, ಹಾಲೇಕಲ್ಲು ಸಿದ್ದಲಿಂಗಪ್ಪ, ಟಿ.ಎಸ್.ನಾಗರಾಜ್, ಕೆ.ಬಾನಪ್ಪ, ಎ.ಮರಿಯಪ್ಪ, ನರೇಗಾ ರಂಗನಾಥ್, ಕುಂದವಾಡ ಚಂದ್ರಪ್ಪ, ಎ.ತಿಪ್ಪೇಶ್, ಟಿ.ಬಿ.ಮೂರ್ತಿ, ಎಚ್.ಪರಶುರಾಮ, ಸುರೇಶ್ ಯರಗುಂಟೆ, ಶಿವಕುಮಾರ್ ಡಿ.ಶೆಟ್ಟರ್, ದಾದಾಪೀರ್, ಪಿ.ಖಾದರ್, ಮಹಮ್ಮದ್ ರಫೀಕ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net