ಕೃಷಿ ಪ್ರಧಾನ ಸಂಸ್ಕೃತಿಯ ಚಂಗ್ರಾಂದಿ ಹಬ್ಬ

18 sri 01
ತಾವಳಗೇರಿ ಮೂಂದ್‌ನಾಡ್ ಕೊಡವ ಸಮಾಜದಲ್ಲಿ ನಮ್ಮ ದೇಶ ನಮ್ಮ ಸಂಸ್ಕೃತಿ ಕಾರ್ಯಕ್ರಮದಲ್ಲಿ ಚಂಗ್ರಾಂದಿ ನಮ್ಮೆ ಆಚರಿಸಲಾಯಿತು.
Published on

ಶ್ರೀಮಂಗಲ: ಶ್ರೀಮಂಗಲ ತಾವಳಗೇರಿ ಮೂಂದ್‌ನಾಡ್ ಕೊಡವ ಸಮಾಜದಲ್ಲಿ ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಚಂಗ್ರಾಂದಿ ಪ್ರಯುಕ್ತ ಆಯೋಜಿಸಿದ್ದ ‘ನಮ್ಮ ದೇಶ ನಮ್ಮ ಸಂಸ್ಕೃತಿ’ ಕಾರ್ಯಕ್ರಮದಲ್ಲಿ ಚಂಗ್ರಾಂದಿ ನಮ್ಮೆಯು ಕಾವೇರಿ ಮಾತೆಯನ್ನು ಪ್ರಕೃತಿಯಲ್ಲಿ ಪೂಜಿಸುವ ಹಬ್ಬವಾಗಿದೆ ಎಂಬ ಅಭಿಪ್ರಾಯವನ್ನು ಹಿರಿಯರು ಹಂಚಿಕೊಂಡರು.
ಚಂಗ್ರಾಂದಿ ಆಚರಣೆ ಮೂಲ ಪದ್ಧತಿ ಬಗ್ಗೆ ಸ್ಥಳೀಯರು ಬೆಳಕು ಚೆಲ್ಲಿದರು. ಕೃಷಿಗೆ ಆದ್ಯತೆ ನೀಡುತ್ತಿರುವ ಜಿಲ್ಲೆಯಲ್ಲಿ ಹಬ್ಬಗಳು ಕೂಡ ಕೃಷಿಯ ಹಿನ್ನೆಲೆಯಲ್ಲಿವೆ. ಅದರಂತೆ ದೇವಿಯನ್ನು ಆರಾಧಿಸಲಾಗುತ್ತದೆ ಎಂದು ತಿಳಿಸಿದರು.
ತಾವಳಗೇರಿ ಮೂಂದ್‌ನಾಡ್ ಕೊಡವ ಸಮಾಜ ಅಧ್ಯಕ್ಷ ಚೊಟ್ಟೆಯಂಡಮಾಡ ಬೋಸು ವಿಶ್ವನಾಥ್ ಮಾತನಾಡಿ, ಕೃಷಿ ಪ್ರಧಾನ ಜಿಲ್ಲೆಯಲ್ಲಿ ಚಂಗ್ರಾಂದಿ ವಿಶೇಷ ಹಬ್ಬವಾಗಿದೆ. ಕಣಿಪೂಜೆ, ತೀರ್ಥಪೂಜೆ ಮೂಲಕ ದೇವಿಯನ್ನು ಆರಾಧಿಸುತ್ತೇವೆ. ಕುಟುಂಬದ ಹಿರಿಯರು, ಐನ್‌ಮನೆ, ಗುರುಕಾರೊಣನಿಗೆ ತೀರ್ಥ ಅರ್ಪಿಸಿ, ಆಚರಣೆ ಮಾಡಲಾಗುತ್ತದೆ. ದೋಸೆ, ಸಿಹಿಕುಂಬಳ ಸಾರು, ದೇವಿಗೆ ಪ್ರಸಾದ ನೀಡುತ್ತೇವೆ. ತೀರ್ಥೋದ್ಭವದ ನಂತರದ 10 ದಿನ ಪತ್ತಾಲೋದಿ ಆಚರಣೆ ಮೂಲಕ ದೇವಿಯನ್ನು ಪೂಜಿಸುತ್ತೇವೆ. ಕುಟುಂಬದಲ್ಲಿ ಸಾವು, ಹೆರಿಗೆ ಸೂತಕ ಇರುವವರು 10 ದಿನದ ನಂತರ ಕೂಡ ದೇವಿಯನ್ನು ಪೂಜಿಸುವ ಹಬ್ಬವಾಗಿದೆ ಎಂದು ಮಾಹಿತಿ ನೀಡಿದರು.
ಚಂಗುಲಂಡ ಅಶ್ವಿನಿ ಸತೀಶ್ ಮಾತನಾಡಿ, ಚಂಗ್ರಾಂದಿ ಹಬ್ಬದಲ್ಲಿ ಮಹಿಳೆಯರ ಜವಬ್ದಾರಿ ಹೆಚ್ಚಿರುತ್ತದೆ. ದೇವಿ ಕಣಿಪೂಜೆ, ದೋಸೆ, ಅರ್ಪಣೆ, ದೇವಿಯನ್ನು ಮಹಿಳೆಯರು ತೊಡುವ ಆಭರಣಗಳಿಂದ ಸಿಂಗರಿಸಿ ಸಂಭ್ರಮಿಸುತ್ತೇವೆ ಎಂದರು.
ಟಿ. ಶೆಟ್ಟಿಗೇರಿ ಗೌರಿ- ಗಣೇಶ ಸೇವಾ ಸಮಿತಿ, ಸಂಭ್ರಮ ಪೊಮ್ಮಕ್ಕಡ ಕ್ರೀಡೆ- ಸಾಂಸ್ಕೃತಿಕ ಸಂಸ್ಥೆ, ಕೊಡವ ತಕ್ಕ್ ಎಳ್ತ್‌ಕಾರಡ ಕೂಟ, ಶ್ರೀಮಂಗಲ ಕೊಡವ ಸಮಾಜ ಪೊಮ್ಮಕ್ಕಡ ಕೂಟ ಸದಸ್ಯರು ಆಚರಣೆ ಮಾಹಿತಿ ಹಂಚಿಕೊಂಡರು. ಕಾರ್ಯಕ್ರಮ ಸಂಚಾಲಕ ಮಚ್ಚಮಾಡ ಅನೀಶ್ ಮಾದಪ್ಪ, ನಾಡ್‌ತಕ್ಕ ಕೈಬಿಲಿರ ಹರೀಶ್ ಅಪ್ಪಯ್ಯ, ತಾವಳಗೇರಿ ಮೂಂದ್‌ನಾಡ್ ಕೊಡವ ಸಮಾಜ ಕಾರ್ಯದರ್ಶಿ ಮನ್ನೇರ ರಮೇಶ್, ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯದರ್ಶಿ ಕಟ್ಟೇರ ಈಶ್ವರ, ನಿರ್ದೇಶಕ ಕೋಟೃಮಾಡ ಸುಮಂತ್ ಮಾದಪ್ಪ, ಶ್ರೀಮಂಗಲ ಕೊಡವ ಸಮಾಜ ಪೊಮ್ಮಕ್ಕಡ ಕೂಟ ಅಧ್ಯಕ್ಷೆ ನೆಲ್ಲೀರ ನೀನಾ, ಪ್ರಮುಖರಾದ ತಡಿಯಂಗಡ ಸೌಮ್ಯ, ಉಳುವಂಗಡ ಕಾವೇರಿ ಉದಯ, ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net