ಕೃಷಿ ಪರಿಕರಗಳಿಗೆ ಪೂಜೆ

bhr pooja
ಬಾಳೆಹೊನ್ನೂರು ಸಮೀಪದ ಕುಂಬತ್ತಿ ಗ್ರಾಮದ ಪ್ರಗತಿಪರ ಕೃಷಿಕರಾದ ಸುಶೀಲಮ್ಮ ಅವರ ಕುಟುಂಬದಲ್ಲಿ ಗೋಪೂಜೆ ನೆರವೇರಿಸಿ ಕುಟುಂಬಸ್ಥರು ಗೋಗ್ರಾಸ ನೀಡಿದರು.
Published on

ಬಾಳೆಹೊನ್ನೂರು: ಹೋಬಳಿಯಾದ್ಯಂತ ರೈತರು ಸಂಭ್ರಮದಿಂದ ಬಲಿಪಾಡ್ಯಮಿ, ಗೋಪೂಜೆ ಆಚರಿಸಿದರು.

ಬೆಳಗ್ಗೆ ರೈತರು ಮನೆಗಳಲ್ಲಿನ ಗೋವುಗಳನ್ನು ಸ್ವಚ್ಛಗೊಳಿಸಿ, ಅವುಗಳಿಗೆ ಹೂಮಾಲೆ, ವಿವಿಧ ಲಗಳನ್ನು ಮಾಲೆ ಮಾಡಿ ಹಾಕಿ ಮೈ ತುಂಬ ಹಂಡ ಹುಂಡದ ಬಣ್ಣದ ಚಿತ್ತಾರ ಬರೆದು ಸಿಂಗರಿಸಿ ಪೂಜಿಸಿದರು. ಗೋವಿನ ಕೊಟ್ಟಿಗೆಗಳನ್ನು ತಳಿರು ತೋರಣ, ಹೂ ಮಾಲೆಗಳಿಂದ ಅಲಂಕರಿಸಿದ್ದರು. ಗೋವುಗಳಿಗೆ ಅಡಕೆ ಕಾಯಿ, ಹಿಂಗಾರ, ಉಗಣೆಕಾಯಿ, ಪಚ್ಚೆತೆನೆ, ಏಲಕ್ಕಿ ಗೆರೆ, ಚೆಂಡು ಹೂವು, ಬಾಳೆಹಣ್ಣುಗಳ ಮಾಲೆ ಕಟ್ಟಿ, ಪೂಜೆಯ ನಂತರ ಗೋವುಗಳಿಗೆ ದೋಸೆ, ಬಾಳೆಹಣ್ಣು, ಅಕ್ಕಿ, ಬೆಲ್ಲ ಸೇರಿದಂತೆ ವಿವಿಧ ಆಹಾರಗಳನ್ನು ನೀಡಿ ಪಟಾಕಿ ಸಿಡಿಸಿ ಕೊಟ್ಟಿಗೆಯಿಂದ ಮೇಯಲು ಹೊರ ಕಳುಹಿಸಿದರು. ಸಂಜೆ ಮನೆಗೆ ವಾಪಸ್ ಬಂದ ಗೋವುಗಳನ್ನು ಕೊಟ್ಟಿಗೆ ಬಾಗಿಲಿನಲ್ಲಿ ಒನಕೆ ಅಡ್ಡಇಟ್ಟು, ಓಕುಳಿ ಮಾಡಿ ಬರಮಾಡಿಕೊಂಡರು.

ಬಲಿಪಾಡ್ಯಮಿ ದಿನ ಕೃಷಿಕರು ಮನೆಗಳಲ್ಲಿ ನೇಗಿಲು, ನೊಗ, ಕತ್ತಿ, ಹಾರೆ, ಅಕ್ಕಿ ಮಡಕೆ, ಸೇರು, ಮೊರ ಸೇರಿದಂತೆ ಕೃಷಿ ಉಪಕರಣಗಳನ್ನು ಸ್ವಚ್ಛಗೊಳಿಸಿ ಇಟ್ಟು ಅಲಂಕರಿಸಿ ಮಿಳ್ಳೆ ದೇವರನ್ನು ವಿಶೇಷವಾಗಿ ಪೂಜಿಸಿದರು.

ಪಾಡ್ಯದ ಅಂಗವಾಗಿ ಬುಧವಾರ ಸಂಜೆ ಗೋಧೂಳಿ ಲಗ್ನದಲ್ಲಿ ಬಲೀಂದ್ರ ಪೂಜೆ ಮೂಲಕ ಬಲಿಚಕ್ರವರ್ತಿಯನ್ನು ನೆನಪಿಸಿಕೊಳ್ಳಲಾಯಿತು. ಕತ್ತಲಾಗುತ್ತಿದ್ದಂತೆ ಮನೆಯ ಮುಂಭಾಗದ ತುಳಸಿ ಕಟ್ಟೆಯಲ್ಲಿ ದೀಪ ಹಚ್ಚಿ ಪೂಜೆ ಸಲ್ಲಿಸಿ ಬಳಿಕ ಕೃಷಿ ಜಮೀನು, ತೋಟ, ಗದ್ದೆ ಹಾಗೂ ಮನೆಗಳ ಮುಂಭಾಗದಲ್ಲಿ ಸಾಲು ಸಾಲು ಹಣತೆಗಳನ್ನು ಹಚ್ಚಿದರು. ದೂಪದ ಕೋಲಿನಿಂದ ದೂಪಾರತಿ ಮಾಡಿದರು. ದೀಪ ಹಚ್ಚುವ ಸಂದರ್ಭದಲ್ಲಿ ಮನೆ ದೇವರು, ಗ್ರಾಮ ದೇವರು, ಇಷ್ಟ ದೇವರು ಸೇರಿದಂತೆ ವಿವಿಧ ದೇವರುಗಳ ಹೆಸರುಗಳನ್ನು ಹೇಳುತ್ತ ದೀಪೋಳಿಗೆ, ದೀಪೋಳಿಗೆ ಎಂದು ಕೂಗಿ ಸಂಭ್ರಮಿಸಿದರು. ಪಟಾಕಿಗಳು ಬಾನಂಗಳದಲ್ಲಿ ಆಕರ್ಷಕ ಚಿತ್ತಾರ ಮೂಡಿಸಿದವು. ಬುಧವಾರವೂ ವಿವಿಧೆಡೆ ಅಂಗಡಿ ಮುಂಗಟ್ಟುಗಳಲ್ಲಿ ಧನಲಕ್ಷ್ಮೀ ಪೂಜೆ, ದೇವಾಲಯಗಳಲ್ಲಿ ವಾಹನ ಪೂಜೆ ನಡೆಯಿತು. ದೀಪಾವಳಿ ಅಂಗವಾಗಿ ಗುರುವಾರ ಕರಿ-ಸಿರಿ ಹಬ್ಬ, ಭಗಿನೀ ಗೃಹೇ ಭೋಜನಂ ನಡೆಯಿತು. ಶುಕ್ರವಾರ ಕದಿರು ತರುವುದು, ವರ್ಷ ತಡಕು (ವರ್ಷದಡುಗೆ) ಹಬ್ಬ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net