

ವಿಜಯವಾಣಿ ಸುದ್ದಿಜಾಲ ಧಾರವಾಡ
ಮನೆಗೆ ಬೇಕಾದ ಪದಾರ್ಥಗಳನ್ನು ಹೊರಗಡೆಯಿಂದ ತರದೆ ಸ್ವತಃ ಬೆಳೆಯುವವನೇ ನಿಜವಾದ ರೈತ ಎಂದು ಕನ್ಹೇರಿಯ ಶ್ರೀಕ್ಷೇತ್ರ ಸಿದ್ಧಗಿರಿ ಮಹಾ ಸಂಸ್ಥಾನ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಕೃಷಿ ವಿಶ್ವ ವಿದ್ಯಾಲಯದ ಕೃಷಿ ಮೇಳದಲ್ಲಿ ಮಂಗಳವಾರ ಆಯೋಜಿಸಿದ್ದ ಮಣ್ಣು ಮತ್ತು ನೀರಿನ ಸಂಸ್ಕರಣೆ ಹಾಗೂ ಸದ್ಭಳಕೆ ವಿಚಾರಗೋಷ್ಠಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನಿತ್ಯ ಹೊಲಕ್ಕೆ ಹೋಗಬೇಕಲ್ಲದೆ, ಮಣ್ಣು, ನೀರು ಮತ್ತು ಗಿಡಗಳ ಜತೆಗೆ ಸಂಪರ್ಕವಿದ್ದರೆ ಮಾತ್ರ ರೈತ. ರೈತರು ಜಾಣರಾಗಬೇಕು. ಬೀಜದಿಂದ ಬೀಜದವರೆಗೆ ಸ್ವಾವಲಂಬಿಯಾಗಬೇಕು. ಇಲ್ಲದಿದ್ದರೆ ಶೋಷಣೆಗೆ ಒಳಗಾಗುವ ಸ್ಥಿತಿ ಬರಲಿದೆ. ಕೃಷಿ ವಿಶ್ವ ವಿದ್ಯಾಲಯದ ಪದವಿ ಪಡೆದವರಲ್ಲಿ ಶೇ.2 ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಕೃಷಿಯತ್ತ ಆಸಕ್ತಿ ತೋರಿದ್ದಾರೆ. ಕೃಷಿ ಮೇಳದಲ್ಲಿ ಸಾಕಷ್ಟು ಸಾಧಕ ರೈತರು ಹಂಚಿಕೊಂಡ ಅನುಭವಗಳನ್ನು ಉಳಿದ ರೈತರು ಅಳವಡಿಸಿಕೊಂಡು ಸಾಧಕ ರೈತರಾಗಬೇಕು ಎಂದರು.
ಡಾ. ಆರ್.ಈ. ಗೊಲ್ಲರ ಮಾತನಾಡಿ, ಒಣ ಬೇಸಾಯ ಕೃಷಿಯಲ್ಲಿ ಮಣ್ಣು ಮತ್ತು ನೀರಿನ ನಿರ್ವಹಣೆ ಅವಶ್ಯ. ಬರ ನಿರೋಧಕತೆಗೆ ಪ್ರತಿ ಕ್ಷೇತ್ರದಲ್ಲಿ ಬಿದ್ದಂತಹ ಮಳೆ ನೀರನ್ನು ಭೂಮಿಯಲ್ಲಿ ಇಂಗುವಂತೆ ಮಾಡಬೇಕು. ಕನಿಷ್ಠ 4 ರಿಂದ 5 ಎಕರೆಗೆ ಒಂದು ಕೃಷಿ ಹೊಂಡ ಅಳವಡಿಸಿಕೊಂಡು ಮಳೆ ನೀರನ್ನು ಶೇಖರಿಸಿ ಸಂಧಿಗ್ಧ ಹಂತದಲ್ಲಿ ಬೆಳೆಗಳಿಗೆ ಒಂದರಿಂದ ಎರಡು ಸಲ ನೀರು ಒದಗಿಸಿದರೆ ಬೆಳೆ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಡಾ. ಪ್ರಕಾಶ ಭಟ್ ಮಾತನಾಡಿ, ಕೃಷಿ ಬೇಸಾಯಕ್ಕೆ ಮಣ್ಣು ಮತ್ತು ನೀರು ನೈಸರ್ಗಿಕ ಸಂಪತ್ತು. ಇದರಲ್ಲಿ ಒಂದು ಏರುಪೇರಾದರೆ ಕೃಷಿ ಮೇಲೆ ಪರಿಣಾಮ ಬೀರುತ್ತದೆ. ಮಳೆಗಾಲದಲ್ಲಿ ಬೀಳುವ ನೀರನ್ನು ಪೋಲಾಗದಂತೆ ಹಿಡಿದಿಟ್ಟು ಇಂಗಿಸಬೇಕು. ಹೆಚ್ಚಾದ ನೀರನ್ನು ಕೃಷಿ ಹೊಂಡದಲ್ಲಿ ಶೇಖರಿಸಿಕೊಳ್ಳಬೇಕು. ಹವಾಮಾನ ಬದಲಾವಣೆ ಕಾಲದಲ್ಲಿ ಮಣ್ಣು ಮತ್ತು ನೀರು ಸಂಸ್ಕರಣೆ ಜತೆಗೆ ಅರಣ್ಯ ಮರಗಳನ್ನು ಬೆಳೆಸಬೇಕು ಎಂದರು.
ಡಾ. ಜೆ.ವಿ. ಗೌಡ, ಡಾ. ಎನ್.ಕೆ. ಹೆಗಡೆ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕೃವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ ಮಾತನಾಡಿ, ಮಣ್ಣು ಮತ್ತು ನೀರು ನಿಸರ್ಗದ ಎರಡು ಸಂಪನ್ಮೂಲಗಳು. ಗಡಸು ಪದಾರ್ಥಗಳು ಸಾವಿರಾರು ವರ್ಷಗಳ ಪರಿಶ್ರಮದಿಂದ ಒಂದು ಇಂಚು ಮಣ್ಣು ತಯಾರಾಗುತ್ತದೆ. ಇಂತಹ ಮಣ್ಣು ರಭಸವಾಗಿ ಬೀಳುವ ಮಳೆಗೆ ಹರಿದು ಹೋಗದಂತೆ ಕಾಪಾಡಿಕೊಳ್ಳಬೇಕು. ಇದಕ್ಕಾಗಿ ಇಳಿಜಾರಿಗೆ ಅಡ್ಡಲಾಗಿ ಬದುಗಳ ನಿರ್ಮಾಣ ಮಾಡಬೇಕು. ಸಮತಟ್ಟಾದ ಹೊಲಗಳಲ್ಲಿ ಚೌಕು ಮಡಿ ಮಾಡಿ ಬಿದ್ದಂತಹ ಮಳೆ ನೀರನ್ನು ಭೂಮಿಗೆ ಇಂಗಿಸಬೇಕು. ಕೃಷಿ ತ್ಯಾಜ್ಯಗಳನ್ನು ಸುಡದೆ ಅವುಗಳ ಸದ್ಭಳಕೆ ಮಾಡಬೇಕು ಎಂದರು.
ಕೃವಿವಿ ಆಡಳಿತ ಮಂಡಳಿ ಸದಸ್ಯ ಶ್ರೀನಿವಾಸ ಕೊಟ್ಯಾನ್, ವಿವಿ ಅಧಿಕಾರಿಗಳು, ಇತರರು ಇದ್ದರು. ಡಾ. ವಿ.ಬಿ. ಕುಲಿಗೋಡ ಸ್ವಾಗತಿಸಿದರು. ಡಾ. ಎಸ್.ಟಿ. ಹುಂಡೇಕರ ವಂದಿಸಿದರು.