ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸಿ

OCT 14-HRP-01
Published on

ಹರಪನಹಳ್ಳಿ: ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಬಿಡಿಪಿ ಮತ್ತು ಕೃಷಿಯೇತರ ಸಾಲ ನೀಡುವಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿದ್ದು, ಸಹಕಾರ ಸಂಘಗಳ ಕಾಯ್ದೆ ಕಲಂ 64ರಡಿ ವಿಚಾರಣೆಗೆ ಒಳಪಡಿಸಬೇಕು. ಸಂಘಕ್ಕೆ ಶೀಘ್ರ ಆಡಳಿತಾಧಿಕಾರಿ ನೇಮಿಸಬೇಕು ಎಂದು ವಕೀಲ ತಿಮ್ಮಲಾಪುರ ರವಿಶಂಕರ್ ಒತ್ತಾಯಿಸಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಘ 10 ಅಂಶಗಳಲ್ಲಿ ಸಹಕಾರ ಕಾಯ್ದೆ ಉಲ್ಲಂಘಿಸಿದೆ. ಸಹಕಾರ ಸಂಘದಿಂದ ಏಳು ಕೋಟಿ ರೂ.ಗೂ ಅಧಿಕ ಹಣ ಬೇಕಾಬಿಟ್ಟಿಯಾಗಿ ನೀಡಿದ್ದು, ವಸೂಲಾತಿಯಲ್ಲಿ ಅವ್ಯವಹಾರ ನಡೆದಿದೆ. ಕಾಯಕ ಯೋಜನೆಯಡಿ ರೂ.7.52 ಲಕ್ಷ, ಸ್ವ ಸಹಾಯ ಗುಂಪುಗಳ ಸಾಲದಲ್ಲಿ 14.14 ಲಕ್ಷ, ಸಂಘದ ಬಂಡವಾಳದಿಂದ ಬಿಡಿಪಿ ಸಾಲ 6.98 ಕೋಟಿ ರೂ. ವಸೂಲು ಮಾಡಿಲ್ಲ ಎಂದು ಅಪಾದಿಸಿದರು.

2020-21ನೇ ಸಾಲಿನಲ್ಲಿ ಸಂಘ 1.04 ಲಕ್ಷ ರೂ. ನಿವ್ವಳ ಲಾಭ ಗಳಿಸಿತ್ತು. 2021 ರಿಂದ 2025ರ ವರೆಗೆ 85.80 ಲಕ್ಷ ರೂ. ಕ್ರೋಢಿಕೃತ ನಷ್ಟ ತೋರಿಸಲಾಗಿದೆ. ರಸಗೊಬ್ಬರ ಮಾರಾಟದ ಹಣ, ಇ ಸ್ಟಾೃಂಪ್, ಕಟ್ಟಡ ಬಾಡಿಗೆ ಹಣ ಎಲ್ಲಿಗೆ ಹೋಗಿದೆ ಎಂದು ಪ್ರಶ್ನಿಸಿದರು.

19.64 ಲಕ್ಷ ರೂ. ಬಿಡಿಪಿ ಸಾಲದ ಬಗ್ಗೆ ಲೆಕ್ಕಪರಿಶೋಧಕರು ಆಕ್ಷೇಪಿಸಿದ್ದಾರೆ. ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ನಬಾರ್ಡ್ 56.55 ಲಕ್ಷ ರೂ. ಮುಂಜೂರು ಮಾಡಿದ್ದು, ಈ ಪೈಕಿ 30.68 ಲಕ್ಷ ರೂ. ಟೆಂಡರ್ ಕರೆಯಲಾಗಿದೆ, ಬಾಕಿ 25.87 ಲಕ್ಷ ರೂ. ಎಲ್ಲಿದೆ ಎನ್ನುವುದನ್ನು ಅಡಾವೆ ಪತ್ರದಲ್ಲಿ ಮರೆಮಾಚಲಾಗಿದೆ ಎಂದು ದೂರಿದರು.

ನಿಯಮ ಉಲ್ಲಂಘಿಸಿ ಪಿಗ್ಮಿ ಕಮೀಷನ್ ಕೊಡಲಾಗುತ್ತಿದೆ. ಸಂಘ ನೀಡಿರುವ ಬಿಡಿಪಿ ಸಾಲ 6.98 ಕೋಟಿ ರೂ. ವಸೂಲಿ ಮಾಡದೆ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದೆ. ಕಟ್ಟಡದ ಬಾಡಿಗೆ ಹಣ 10 ಲಕ್ಷ ರೂ. ಇದ್ದು, ರಸಗೊಬ್ಬರ ಮಾರಾಟದಿಂದ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದೆ. ಆದರೂ ಸಂಘ ನಷ್ಟದಲ್ಲಿದೆ ಎಂದು ತೋರಿಸಲಾಗಿದೆ. ಸಂಘಕ್ಕೆ ಆಡಳಿತಾಧಿಕಾರಿ ನೇಮಿಸಬೇಕು. ತಪ್ಪಿತಸ್ಥ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ವಿರುದ್ಧ ಶಿಸ್ತು ಕ್ರಮ ವಹಿಸಬೇಕೆಂದು ವಕೀಲ ತಿಮ್ಮಲಾಪುರ ರವಿಶಂಕರ್ ಆಗ್ರಹಿಸಿದರು. ಸಂಘದ ಸದಸ್ಯರಾದ ಟಿ.ಅಹಮದ್ ಹುಸೇನ್, ಜಿ.ಸುಜಾತ, ಗುಂಡಿ ಮಂಜಪ್ಪ, ಬಾರಿಕರ ರವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net