

ಕಿಕ್ಕೇರಿ: ರಾಜ್ಯದ ಎರಡನೇ ಸ್ಥಾನದಲ್ಲಿರುವ ರೈತ ಸಹಕಾರ ಸಂಘವನ್ನು ಪ್ರಥಮ ಸ್ಥಾನಕ್ಕೆ ತರುವುದು ತಮ್ಮ ಮೂಲ ಉದ್ದೇಶವಾಗಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ತಿಳಿಸಿದರು.
ಪಟ್ಟಣದಲ್ಲಿ ಇತ್ತೀಚೆಗೆ ಜರುಗಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸಂಘದಲ್ಲಿ 4700 ಷೇರುದಾರರಿದ್ದು, ಪ್ರಸಕ್ತ ಸಾಲಿನಲ್ಲಿ 80 ಕೋಟಿ ರೂ. ವಹಿವಾಟು ನಡೆದಿದೆ. 42ಲಕ್ಷ ರೂ.ಗಳಷ್ಟು ಆದಾಯ ಲಭಿಸಿದೆ ಎಂದರು.
ಸಿಇಒ ಕೆ.ಆರ್. ಪುಟ್ಟರಾಜು ಮಾತನಾಡಿ, ಸಂಘದಲ್ಲಿ ರೈತರನ್ನು ಸ್ವಾವಲಂಬಿ ಮಾಡಲು ಸ್ಪರ್ಧಾತ್ಮಕ ದರದಲ್ಲಿ ರಸಗೊಬ್ಬರ, ವಿವಿಧ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ 16ಕೋಟಿ ರೂ. ವಹಿವಾಟು ನಡೆದಿದೆ. ರೈತರಿಗೆ 8.36ಕೋಟಿ ರೂ. ಸಾಲ ನೀಡಲಾಗಿದೆ. ವ್ಯವಸಾಯೇತರ ಸಾಲವಾಗಿ ಬೀದಿ ಬದಿ ವ್ಯಾಪಾರಿ, ಮತ್ತಿತರ ಸಾಲವಾಗಿ 8ಕೋಟಿ ರೂ.ಗಳಷ್ಟು ಸಾಲ ನೀಡಲಾಗಿದೆ. ಜನಸ್ನೇಹಿ ಸಂಘವಾಗಿ ಪಶು ಆಹಾರ, ಇ-ಸ್ಟಾೃಂಪ್, ಗೊಬ್ಬರ, ಪೈಪು, ಜೆರಾಕ್ಸ್, ಬ್ಯಾಂಕಿಂಗ್ ವ್ಯವಹಾರವನ್ನು ಸ್ಪರ್ಧಾತ್ಮಕ ದರದಲ್ಲಿ ನೀಡಲಾಗುತ್ತಿದೆ, ಬಡಜನರಿಗೆ ಅನುಕೂಲವಾಗಲು ತ್ವರಿತವಾಗಿ ಸಮುದಾಯ ಭವನ ಲೋಕಾರ್ಪಣೆ ಮಾಡಲು ಸಜ್ಜಾಗಿದೆ ಎಂದು ಮಾಹಿತಿ ನೀಡಿದರು.
ಶ್ರೀನಾಥ್, ಶೇಖರ್, ತಾರಾನಾಥ್, ಮುರುಳೀಧರ್, ಮನೋಜ್‌ಕುಮಾರ್, ಶಿವರಾಮಯ್ಯ, ಕೋಮಲಾ ಪುಟ್ಟೇಗೌಡ, ಭಾರತಿ ಪ್ರಕಾಶ್, ಸಿಬ್ಬಂದಿ ಭಾರತಿ, ಶೋಭಾ, ಸುಮಿತ್ರಾ, ಮಮತಾ, ಆಶಾ, ನರಸಿಂಹ, ಬಾಬು, ವೆಂಕಟೇಶ್, ಮಲ್ಲಿಕಾ ಮತ್ತಿತರರಿದ್ದರು.