ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಜಯದೇವ್

18arsph1ep
Published on

ಅರಸೀಕೆರೆ: ತಾಲೂಕಿನ ಡಿ.ಎಂ.ಕುರ್ಕೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಚ್.ಕೆ. ಜಯದೇವ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಹನ್ನೆರಡು ಸದಸ್ಯ ಬಲದ ಸಂಘದಲ್ಲಿ ನೀಲಕಂಠಪ್ಪ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಿಗದಿಯಾಗಿತ್ತು. ಜಯದೇವ್ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ದೇವರಾಜ್ ಆಯ್ಕೆ ಪ್ರಕಟಿಸಿದರು.


ನೂತನ ಅಧ್ಯಕ್ಷ ಜಯದೇವ್ ಮಾತನಾಡಿ, ಸಹಕಾರ ಸಂಘದ ವ್ಯಾಪ್ತಿಗೆ ಒಳಪಡುವ ಷೇರುದಾರರ ಹಿತ ಕಾಯಲು ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದೇನೆ. ಇದುವರೆಗೂ ಅಂದಾಜು 3.5 ಕೋಟಿ ರೂ.ಸಾಲ ವಿತರಣೆ ಮಾಡಲಾಗಿದ್ದು, ಅನ್ನದಾತರ ಕೃಷಿ ಚಟುವಟಿಕೆಗಳ ಅಗತ್ಯಕ್ಕೆ ತಕ್ಕಂತೆ ಸೌಲಭ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.


ಕಾರ್ಯನಿರ್ವಾಹಕ ಅಧಿಕಾರಿ ಜ್ಯೋತಿಪ್ರಕಾಶ್, ನಿರ್ದೇಶಕರಾದ ಬಸವರಾಜ್, ಪ್ರಕಾಶ್, ಮಂಜುಳಾ, ವಿಶ್ವನಾಥ್, ಗ್ರಾ.ಪಂ. ಮಾಜಿ ಅಧ್ಯಕ್ಷ ಸುರೇಶ್, ಅನಿಲ್, ಎಂ.ಜಿ.ಲೋಕೇಶ್, ಮುಖಂಡರಾದ ಬಿ.ಎನ್.ವಿದ್ಯಾಧರ್, ಕೆವಿಎನ್ ಶಿವು, ರಘು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net