ದಾವಣಗೆರೆ: ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆ ಕೈಬಿಡುವಂತೆ ಆಗ್ರಹಿಸಿ ಹುಚ್ಚವ್ವನಹಳ್ಳಿ ಮಂಜುನಾಥ ಬಣದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಯಚಾಮರಾಜೇಂದ್ರ ವೃತ್ತದಿಂದ ಜಯದೇವ ವೃತ್ತದ ಮೂಲಕ ಬೆಸ್ಕಾಂ ಕಚೇರಿಗೆ ತೆರಳಿದ ರೈತರು, ಬೆಸ್ಕಾಂ ಅಧೀಕ್ಷಕರ ಮೂಲಕ ಮುಖ್ಯಮಂತ್ರಿಗೆ ಮನವಿಪತ್ರ ಸಲ್ಲಿಸಿದರು.
ಕೃಷಿ ಪಂಪ್‌ಸೆಟ್‌ಗಳಿಗೆ ಇದುವರೆಗೆ 10 ಎಚ್‌ಪಿವರೆಗೆ ಉಚಿತ ವಿದ್ಯುತ್ ನೀಡುತ್ತಿದ್ದ ಸರ್ಕಾರ, ಇದೀಗ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತಂದು ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆಗೆ ಹುನ್ನಾರ ನಡೆಸಿದೆ. ಇದು ರೈತರಿಗೆ ಮಾರಕವಾಗಲಿದೆ ಎಂದು ಪ್ರತಿಭನಾಕಾರರು ದೂರಿದರು.
ಈ ಬಾರಿ ಉತ್ತಮ ಮಳೆಯಾಗಿದೆ. ಅಂತರ್ಜಲ ಹೆಚ್ಚಿದೆ. ಆದರೆ ಸಮರ್ಪಕ ವಿದ್ಯುತ್ ಪೂರೈಸುತ್ತಿಲ್ಲ. ಈಗಾಗಲೆ ಮುಂಗಾರು ಬೆಳೆ ನಾಶವಾಗಿದೆ. ಸರ್ಕಾರ ಇದುವರೆಗೆ 5 ಗಂಟೆ ವಿದ್ಯುತ್ ನೀಡುತ್ತಿತ್ತು. ಆದರೆ ಸತತ 10 ಗಂಟೆ ಹಗಲು ವೇಳೆಯಲ್ಲೇ ಗುಣಮಟ್ಟದ ವಿದ್ಯುತ್ ನೀಡಬೇಕು.
ಭಾಗ್ಯಜ್ಯೋತಿ, ಕುಟೀರಜ್ಯೋತಿಗಳಿಗೆ ಯುನಿಟ್ ನಿಗದಿಪಡಿಸದೆ ಸಂಪೂರ್ಣ ಉಚಿತ ವಿದ್ಯುತ್ ನೀಡಬೇಕು ಹಾಗೂ ಇದರ ಬಾಕಿ ಮೊತ್ತವನ್ನು ಮನ್ನಾ ಮಾಡಬೇಕು. ವಿದ್ಯುತ್ ಖಾಸಗೀಕರಣ, ವಿದ್ಯುಶ್ಚಕ್ತಿ ಕಾಯ್ದೆ ತಿದ್ದುಪಡಿ ಮಾಡುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹುಚ್ಚವ್ವನಹಳ್ಳಿ ಮಂಜುನಾಥ, ಚಿಕ್ಕತೊಗಲೇರಿ ಕೆಂಚಪ್ಪ, ಹುಚ್ಚವ್ವನಹಳ್ಳಿ ಸಿದ್ದಪ್ಪ ನಾಯಕ, ಹುಚ್ಚವ್ವನಹಳ್ಳಿ ಪ್ರಕಾಶ್, ವಿ.ಎಚ್.ರಾಮಚಂದ್ರ, ಕೋಲ್ಕುಂಟೆ ಉಚ್ಚೆಂಗಪ್ಪ,ಎಚ್.ಬಸವಾಪುರದ ಸಿದ್ದೇಶ ಇತರರಿದ್ದರು.
--