ಕೃಷಿ ಪಂಪ್‌ಸೆಟ್‌ಗೆ ಆಧಾರ್ ಲಿಂಕ್

ajp sabe
ಅಜ್ಜಂಪುರದಲ್ಲಿ ಮೆಸ್ಕಾಂ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಚಿಕ್ಕಮಗಳೂರು ಮೆಸ್ಕಾಂ ಅಧೀಕ್ಷಕ ಮಂಜುನಾಥ್ ಮಾತನಾಡಿದರು. ರಾಮಕೃಷ್ಣ, ಲಿಂಗರಾಜು, ಕುಮಾರ್ ಇತರರಿದ್ದರು.
Published on

ಕಡೂರು: ಕೃಷಿ ಪಂಪ್‌ಸೆಟ್ ಅಕ್ರಮ ಸಕ್ರಮಕ್ಕೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಜ್ಯೇಷ್ಠತೆ ಆಧಾರದಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲಾಗುವುದು ಎಂದು ಚಿಕ್ಕಮಗಳೂರು ಮೆಸ್ಕಾಂ ಅಧೀಕ್ಷಕ ಮಂಜುನಾಥ್ ತಿಳಿಸಿದರು.

ಅಜ್ಜಂಪುರ ಮೆಸ್ಕಾಂ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಗ್ರಾಹಕರ ಸಮಸ್ಯೆ ಆಲಿಸಿ ಪರಿಹಾರ ತಿಳಿಸಿದರು. ಚೆನ್ನಾಪುರ ರೈತ ಸಿದ್ದೇಗೌಡ ಮಾತನಾಡಿ, ಬಗ್ಗವಳ್ಳಿ ರಸ್ತೆ ಬದಿ ಬೆಳೆಸಿದ ಗಿಡಗಳ ಮೇಲೆ ವಿದ್ಯುತ್ ಲೈನ್ ಹಾದುಹೋಗಿದೆ. ಇದರಿಂದ ತೊಂದರೆ ಆಗುತ್ತದೆ. ಕೇಬಲ್ ಹಾಕಿದರೆ ಅನುಕೂಲವೆಂದು ತಿಳಿಸಿದರು. ಟಿಸಿ ಕಂಬಗಳ ಸುತ್ತ ಗಿಡಗಂಟಿ ಬೆಳೆದಿದೆ. ಜಂಗಲ್ ಕಟಿಂಗ್ಸ್ ಮಾಡಿ ಎಂದು ಮನವಿ ಮಾಡಿದರು.

ಎಂ.ಸಿ.ಮಂಜುನಾಥ್ ಮಾತನಾಡಿ, ಹೊಸಳ್ಳಿ ರೈತರು 2018-19ರಲ್ಲಿ ಅಕ್ರಮ ಸಕ್ರಮಕ್ಕೆ ಅರ್ಜಿ ಹಾಕಿದ್ದು ಅವರಿಗೆ ಜ್ಯೇಷ್ಠತೆ ಯಾವಾಗ ಬರುತ್ತದೆ ಎಂಬ ಬಗ್ಗೆ ನಿಖರವಾಗಿ ತಿಳಿಸಬೇಕು. ರೈತರು ಪ್ರತಿ ಸಭೆಯಲ್ಲೂ ಸಿದ್ಧ ಉತ್ತರ ಕೇಳಿಕೊಂಡು ಹೋಗುವುದನ್ನು ತಪ್ಪಿಸಬೇಕೆಂದು ಒತ್ತಾಯಿಸಿದರು. ವಿದ್ಯುತ್ ಗುತ್ತಿಗೆದಾರ ಕೆ.ವಿ.ಅಣ್ಣಯ್ಯ ಮನೆಯ ಹತ್ತಿರ ವಿದ್ಯುತ್ ಕಂಬದಲ್ಲಿ ಪದೇ ಪದೆ ವಿದ್ಯುತ್‌ಡ್ರಾಪ್ ಆಗುತ್ತದೆ. ಇದನ್ನು ಸರಿಪಡಿಸಬೇಕೆಂದು ಮನವಿ ಮಾಡಿದರು.

ಅಜ್ಜಂಪುರ ಜೆಇ ರಾಮಕೃಷ್ಣ ಮಾತನಾಡಿ, ಕಳೆದ ಜನಸಂಪರ್ಕ ಸಭೆಯಲ್ಲಿ ಒಟ್ಟು 13 ಅರ್ಜಿಗಳು ಬಂದಿದ್ದು, ಎಲ್ಲ ಅರ್ಜಿದಾರರ ಸಮಸ್ಯೆಗಳನ್ನು ಹಾಗೂ ಲೈನ್‌ಗಳನ್ನು ದುರಸ್ತಿ ಮಾಡಿದ್ದು, ಯಾವುದೇ ಕೆಲಸ ಬಾಕಿ ಇಲ್ಲ ಎಂದು ತಿಳಿಸಿದರು. ಕಡೂರು ಮೆಸ್ಕಾಂ ಇಇ ಲಿಂಗರಾಜು ಅವರು ಮೆಸ್ಕಾಂಗೆ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ. ಹೀಗಾಗಿ ಹೆಚ್ಚಿನ ಸಮಸ್ಯೆಯಾಗದಂತೆೆ ತಕ್ಷಣವೇ ಸಮಸ್ಯೆ ಬಗೆಹರಿಸಲಾಗುವುದು ಹಾಗೂ 14 ಫಿಡರ್‌ಗಳ ವ್ಯಾಪ್ತಿಯ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ರೈತರಿಗೆ ವಿದ್ಯುತ್ ಕಡಿತದ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು. ಶಿವನಿ ಜೆಇ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net