ಕೃಷಿ ಪಂಪ್‌ಸೆಟ್‌ಗಳ ಸಕ್ರಮಕ್ಕೆ ಕ್ರಮ

Bescom
Published on

ಚಿತ್ರದುರ್ಗ: ಜಿಲ್ಲಾದ್ಯಂತ ಕೃಷಿ ಪಂಪ್‌ಸೆಟ್‌ಗಳ ಸಕ್ರಮಕ್ಕೆ 2023ರ ಸೆ. ಅಂತ್ಯಕ್ಕೆ 13,065 ಅರ್ಜಿ ಸಲ್ಲಿಕೆಯಾಗಿವೆ. ಅದರಲ್ಲಿ 6,640ಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಆದೇಶವಾಗಿದ್ದು, 133 ಕೋಟಿ ರೂ. ಅನುದಾನವೂ ಬಿಡುಗಡೆಯಾಗಿದೆ. ಈ ಮೂಲಕ 2020-21ರಿಂದ ಸಕ್ರಮಕ್ಕೆ ಬಾಕಿ ಉಳಿದಿದ್ದವುಗಳಲ್ಲಿ ಅರ್ಧದಷ್ಟು ಪಂಪ್‌ಸೆಟ್‌ಗಳು ಮಾರ್ಚ್ ಅಂತ್ಯದೊಳಗೆ ಸಂಪರ್ಕ ಪಡೆದುಕೊಳ್ಳುವ ಸಾಧ್ಯತೆ ಇದೆ…

ಜಿಪಂ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧ್ಯಕ್ಷತೆಯಲ್ಲಿ ಬೆಸ್ಕಾಂ ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ಅಧಿಕಾರಿಗಳ ಜೊತೆ ಶನಿವಾರ ನಡೆದ ಸಭೆಯಲ್ಲಿ ಈ ಭರವಸೆ ದೊರೆಯಿತು. ಅಲ್ಲದೆ, ಗಂಭೀರ ಚರ್ಚೆಗಳೂ ನಡೆದವು.

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬಿಳಗಿ ಮಾತನಾಡಿ, ನಿಯಮಾನುಸಾರ ಅರ್ಜಿಯ ಹಿರಿತನ ಆಧರಿಸಿ ಕೃಷಿ ಪಂಪ್‌ಸೆಟ್ ಆಯ್ಕೆ ಮಾಡಿಕೊಳ್ಳಲಾಗಿದೆ. ಹೀಗಾಗಿ ಇನ್ನೂ 7,459 ಸಕ್ರಮಕ್ಕೆ ಬಾಕಿ ಉಳಿಯಲಿದ್ದು, ಇನ್ನೊಂದು ಹಂತದಲ್ಲಿ ಸಂಪರ್ಕ ಕಲ್ಪಿಸಲು ಕ್ರಮವಹಿಸಲಾಗುವುದು ಎಂದು ಮಾಹಿತಿ ನೀಡಿದರು.

ಎಂಎಲ್ಸಿ ಕೆ.ಎಸ್.ನವೀನ್ ಮಾತನಾಡಿ, ಸಕ್ರಮ ಸಂಬಂಧ ಅರ್ಜಿ ಸಲ್ಲಿಸಿ, ನಾನೇ ಒಂದೂವರೆ ವರ್ಷದಿಂದ ಕಾಯುತ್ತಿದ್ದೇನೆ. ಅಧಿಕಾರಿಗಳು ಹಿರಿತನ ಆಧರಿಸಿ ಆಯ್ಕೆ ಮಾಡುತ್ತಿಲ್ಲವೆಂದು ಅನುಮಾನದ ಜತೆ ಆಕ್ಷೇಪ ವ್ಯಕ್ತಪಡಿಸಿದರು. ಅನುದಾನ ಲಭ್ಯವಿರುವ ಕಾರಣ ಆದೇಶವಾಗಿರುವ ಎಲ್ಲವಕ್ಕೂ ಸಂಪರ್ಕ ಕಲ್ಪಿಸಲಾಗುವುದು ಎಂದು ಬೆಸ್ಕಾಂ ಅಧಿಕಾರಿಗಳು ಆಶ್ವಾಸನೆ ನೀಡಿದರು.

ನಿರಂತರ ಜ್ಯೋತಿ ಪ್ರಸ್ತಾವನೆಗೆ ಸೂಚನೆ: ನಿರಂತರ ಜ್ಯೋತಿ ಯೋಜನೆಯಿಂದ ಜಿಲ್ಲೆಯಲ್ಲಿ ಹೊರಗುಳಿದ ಗ್ರಾಮ, ಹಟ್ಟಿ ಹಾಗೂ ಜನವಸತಿ ಪ್ರದೇಶ ಗುರುತಿಸಿ, ಹೊಸ ಪ್ರಸ್ತಾವನೆ ಸಲ್ಲಿಸಿ. ಆದ್ಯತೆ ಮೇರೆಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಮಹಂತೇಶ ಬಿಳಗಿ ಹೇಳಿದರು.

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ನನ್ನ ಕ್ಷೇತ್ರ ವ್ಯಾಪ್ತಿಯ ಅನೇಕ ಗ್ರಾಮಗಳು ಈ ಯೋಜನೆಯಿಂದ ಹೊರಗುಳಿದಿವೆ. ವಿದ್ಯುತ್ ಸೌಲಭ್ಯಕ್ಕಾಗಿ ಜನರಿಂದ ಒತ್ತಡ ಹೆಚ್ಚಾಗುತ್ತಿದೆ. ಈಗಾಗಲೇ 12 ಗ್ರಾಮಗಳಿಗೆ ಸೌಲಭ್ಯ ಕಲ್ಪಿಸಲು ಪ್ರಸ್ತಾವನೆ ಸಲ್ಲಿಕೆಯಾದರೂ ಅನುಷ್ಠಾನಗೊಂಡಿಲ್ಲ ಎಂದು ಬೇಸರಿಸಿದರು.

ಚಳ್ಳಕೆರೆ ನಗರ ವೇಗವಾಗಿ ಬೆಳೆಯುತ್ತಿದ್ದು, ಇತ್ತೀಚೆಗೆ 200ಕ್ಕೂ ಹೆಚ್ಚು ನೂತನ ಬಡಾವಣೆ ನಿರ್ಮಾಣವಾಗಿವೆ. ಹೀಗಾಗಿ ವಿದ್ಯುತ್ ಬೇಡಿಕೆ ಅಧಿಕವಾಗಿದೆ. ಇನ್ನೆರಡು ವಿದ್ಯುತ್ ಕೇಂದ್ರಗಳ ಸ್ಥಾಪನೆ ಸಂಬಂಧ ನನ್ನಿವಾಳ, ತಿಪ್ಪಾರೆಡ್ಡಿಹಳ್ಳಿ ಸಮೀಪ ಸ್ಥಳ ಗುರುತಿಸಲಾಗಿದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿದರೆ ಜನರಿಗೆ ಅನುಕೂಲವಾಗಲಿದೆ. ಈ ಕುರಿತು ಗಮನಹರಿಸಿ ಎಂದು ಸೂಚಿಸಿದರು.

ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net