ಕೃಷಿ ಡಿಪ್ಲೊಮಾ ಕೋಸ್೯ ಮುಂದುವರಿಸಿ

sfi
Published on

ಬೀದರ್: ರದ್ದುಪಡಿಸಿರುವ ಕೃಷಿ ಡಿಪ್ಲೊಮಾ ಕೋಸ್೯ ಮುಂದುವರಿಸುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಘಟಕದಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿದ ಪ್ರಮುಖರು, ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಡಿ ಜನವಾಡ ಸಮೀಪದ ಕೃಷಿ ಸಂಶೋಧನಾ ಕೇಂದ್ರದಲ್ಲಿ ದಶಕದಿಂದ ಕೃಷಿ ಡಿಪ್ಲೊಮಾ ಕೋಸ್೯ ನಡೆಯುತ್ತಿತ್ತು. ಆದರೀಗ ದಿಢೀರ್ ರದ್ದುಗೊಳಿಸಿದ್ದರಿಂದ ರೈತರ ಮಕ್ಕಳಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಸಜ್ಜಿತವಾದ ವಿದ್ಯಾಲಯ ಕಟ್ಟಡ, ವಸತಿನಿಲಯ ಮತ್ತು ಇತರ ಸೌಕರ್ಯಗಳನ್ನು ಹೊಂದಿದೆ. ಆದರೆ ಪ್ರಸ್ತುತ ಶೈಕ್ಷಣಿಕ ವರ್ಷ ಕೋಸ್೯ ಸ್ಥಗಿತಗೊಳಿಸಲು ವಿವಿಗೆ ಸರ್ಕಾರ ಆದೇಶ ನೀಡಿದೆ. 10 ವರ್ಷಗಳಿಂದ ಜಿಲ್ಲೆಯ ರೈತರ ಮಕ್ಕಳು ಕೋಸ್೯ ಮುಗಿಸಿ ಕೃಷಿ ಕೈಗಾರಿಕೆಗಳಲ್ಲಿ ಉದ್ಯೋಗ ಪಡೆದಿದ್ದಾರೆ. ಆದರೆ ಸರ್ಕಾರ ಈ ವರ್ಷದಿಂದ ಕೋಸ್೯ ಸ್ಥಗಿತಗೊಳಿಸಿದ್ದರಿಂದ ಜಿಲ್ಲೆಯ ವಿದ್ಯಾರ್ಥಿಗಳು ಕೃಷಿ ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದು ದೂರಿದರು.
ಬಡ ರೈತರ ಮಕ್ಕಳು ಕೃಷಿ ಕೋಸ್೯ಗೆ ಕೇವಲ 5 ಸಾವಿರ ಶುಲ್ಕದಲ್ಲಿ ಪ್ರವೇಶ ಪಡೆಯಬಹುದಿತ್ತು. ಕೋಸ್೯ ಮುಗಿಸಿದವರಿಗೆ ಬಿ.ಎಸ್ಸಿ ಪದವಿ ಪಡೆಯಲು ಶೇ.5 ಮೀಸಲಾತಿ ಇತ್ತು. ಕನ್ನಡ ಮಾಧ್ಯಮದಲ್ಲಿ ವಿಷಯಗಳು ಇರುವುದರಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು. ರದ್ದುಗೊಳಿಸಿರುವ ಕೃಷಿ ಡಿಪ್ಲೊಮಾ ಕೋಸ್೯ ಮುಂದುವರಿಸಲು ಸರ್ಕಾರ ಅನುಮತಿ ನೀಡಬೇಕು. ನಿರ್ಲಕ್ಷಿಸಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾಧ್ಯಕ್ಷ ಅರುಣ ಕೊಡಗೆ, ಉಪಾಧ್ಯಕ್ಷ ಅಮರ ಗಾದಗಿ, ಕಾರ್ಯದರ್ಶಿ ರೋಷನ ಮಲ್ಕಾಪುರೆ, ಭೀಮ ಹೊನ್ನಾ, ರಾಮದಾಸ ಕಾಂಬ್ಳೆ, ರಾಕೇಶ ಶಮರ್ಾ, ಸುದೀಪ ಕೋಟೆ, ಶ್ರೇಯಾ ಕೊಡಗೆ, ಗಾಯತ್ರಿ ಇತರರಿದ್ದರು. ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net