ಕೃಷಿ ಜಮೀನು ಅನ್ಯ ಕಾರ್ಯಕ್ಕೆ ಬಳಕೆ

10Naregal1
Published on

ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ

ಪಟ್ಟಣದ ಜಕ್ಕಲಿ ಹಾಗೂ ಗಜೇಂದ್ರಗಡ ರಸ್ತೆಯಲ್ಲಿರುವ ಜಮೀನುಗಳಲ್ಲಿ ಖಾಸಗಿ ಪವನ ಶಕ್ತಿ ಕಂಪನಿಯೊಂದು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯದೇ ವಿದ್ಯುತ್ ಸಂಪರ್ಕ ಕಾಮಗಾರಿ ಪ್ರಾರಂಭಿಸಿದೆ. ಉಳುಮೆ ಭೂಮಿಯನ್ನು ಅನ್ಯ ಕಾರ್ಯಕ್ಕೆ ಬಳಸುವಾಗ ಎನ್​ಎ ಮಾಡಿಸಬೇಕು. ಆದರೆ, ಇಲ್ಲಿ ಆ ಕೆಲಸವಾಗಿಲ್ಲ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಕಾಮಗಾರಿ ನಡೆಸಲಾಗುತ್ತಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.

ನರೇಗಲ್ಲ ಸುತ್ತಲಿನ ಅಬ್ಬಿಗೇರಿ, ಯರೇಬೇಲೇರಿ, ಕುರಡಗಿ ಗ್ರಾಮಗಳಲ್ಲಿ 30ಕ್ಕೂ ಅಧಿಕ ಪವನ ವಿದ್ಯುತ್ ಘಟಕಗಳಿವೆ. ಅವುಗಳಿಂದ ಉತ್ಪಾದನೆಯಾಗುವ ವಿದ್ಯುತ್ ಅನ್ನು ಸಂಗ್ರಹಿಸಿ, ಬೇರೆಡೆ ಸ್ಥಳಾಂತರಿಸಲು ವಿದ್ಯುತ್ ಕಂಬ ಅಳವಡಿಸುವ ಕಾಮಗಾರಿಯನ್ನು ಕೆಎಸ್ ವಿಂಡ್ ರಿನಿವೇಬಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯು ಪ್ರಾರಂಭಿಸಿದೆ. ವಿದ್ಯುತ್ ಕಂಬಗಳನ್ನು ಹಾಕಲು ಬೇಕಾಗುವ ವಸ್ತುಗಳನ್ನು ಸಂಗ್ರಹಿಸಲು ಜಕ್ಕಲಿ ರಸ್ತೆಯ ಸರ್ವೆ ನಂ. 369/3ರ ಎಕರೆ ಪ್ರದೇಶ ಮತ್ತು ವಿದ್ಯುತ್ ಸ್ಥಾವರಗಳ ನಿರ್ವಣಕ್ಕೆ ಬೇಕಾಗಿರುವ ಕಾಂಕ್ರೀಟ್ ಮಿಕ್ಸರ್ (ಆರ್​ಎಂಸಿ ಪ್ಲಾಂಟ್) ಅಳವಡಿಕೆಗೆ ಗಜೇಂದ್ರಗಡ ರಸ್ತೆಯಲ್ಲಿನ ಸರ್ವೆ ನಂ. 379/4ರ 2.05 ಎಕರೆ ಪ್ರದೇಶವನ್ನು ಬಾಡಿಗೆ ಆಧಾರದ ಮೇಲೆ ಪಡೆದುಕೊಳ್ಳಲಾಗಿದೆ. ಆದರೆ, ಎರಡೂ ಜಮೀನುಗಳನ್ನು ಎನ್​ಎ ಮಾಡಲಾಗಿಲ್ಲ. ಅಲ್ಲದೆ, ಯಾವುದೇ ಕೈಗಾರಿಕೆ ಪ್ರಾರಂಭಿಸಲು ವಿವಿಧ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರಗಳನ್ನು ಪಡೆಯುವುದು ಕಡ್ಡಾಯ. ಆದರೆ, ಈ ಪ್ರಕರಣದಲ್ಲಿ ಸ್ಥಳೀಯ ಪಟ್ಟಣ ಪಂಚಾಯಿತಿಯಿಂದ ಯಾವುದೇ ಪರವಾನಗಿ ಪಡೆದಿಲ್ಲ. ಪರವಾನಗಿ ಪಡಯದೇ, ಎರಡು ಪ್ರಮುಖ ರಸ್ತೆಗೆ ಹೊಂದಿಕೊಂಡಿರುವ ಜಮೀನುಗಳಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು, ಪಟ್ಟಣ ಪಂಚಾಯಿತಿಯಿಂದ ಈಗಾಗಲೇ ಮೂರು ನೋಟಿಸ್​ಗಳನ್ನು ನೀಡಿದ್ದರೂ ಯಾವುದಕ್ಕೂ ಕ್ಯಾರೆ ಎನ್ನದೇ ತಮ್ಮ ಪಾಡಿಗೆ ತಾವು ಕಾಮಗಾರಿ ಮುಂದುವರಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಖಾಸಗಿ ಕಂಪನಿಯು ಯಾವುದೇ ಅನುಮತಿ ಪಡೆದುಕೊಳ್ಳದೆ ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿರುವುದು ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಕಲಂ 95ರ ಅಡಿ ಅಪರಾಧವಾಗಿದೆ. ಸರ್ಕಾರದ ನಿಯಮಾವಳಿ ಗಾಳಿಗೆ ತೂರಿದ್ದಲ್ಲದೆ, ಸರ್ಕಾರಕ್ಕೆ ಕಟ್ಟಬೇಕಾದ ವಿವಿಧ ಕರಗಳನ್ನು ಪಾವತಿಸದೇ ಕಾಮಗಾರಿ ನಡೆಸುತ್ತಿದೆ. ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಕಲಂ 95ರ ಅಡಿ ನೋಟಿಸ್ ಜಾರಿಗೊಳಿಸಿದರೂ ಕಂಪನಿಯಿಂದಾಗಲಿ, ಜಮೀನಿನ ಮಾಲೀಕರಿಂದಾಗಲಿ ಉತ್ತರ ಬಂದಿಲ್ಲ.

ನರೇಗಲ್ಲನ ಗಜೇಂದ್ರಗಡ ಹಾಗೂ ಜಕ್ಕಲಿ ರಸ್ತೆಗಳಲ್ಲಿ ಖಾಸಗಿ ಪವನ ವಿದ್ಯುತ್ ಕಂಪನಿ ಕಾಮಗಾರಿ ಪ್ರಾರಂಭಿಸಿರುವ ಬಗ್ಗೆ ಗಮನಕ್ಕೆ ಬಂದಿದೆ. ಸ್ಥಳ ಪರಿಶೀಲಿಸಿ ಮೂರು ಬಾರಿ ನೋಟಿಸ್ ನೀಡಲಾಗಿದೆ. ಆದರೂ, ಕಂಪನಿಯಿಂದ ಯಾವುದೇ ಉತ್ತರ ಬಂದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆದು ದಂಡ ಹಾಕಲಾಗುತ್ತದೆ. | ರಜನಿಕಾಂತ ಕೆಂಗೇರಿ ತಹಸೀಲ್ದಾರ್, ಗಜೇಂದ್ರಗಡ

ಬಡ ರೈತ ತಮ್ಮ ಜಮೀನಿನಲ್ಲಿ ವಾಸಕ್ಕೆ ಅಥವಾ ದನಕರುಗಳಿಗೆ ಶೆಡ್ ನಿರ್ಮಾಣ ಮಾಡಿಕೊಂಡು ವಿದ್ಯುತ್ ಸಂಪರ್ಕ ಸೇರಿ ಇತರ ಸೌಲಭ್ಯಗಳನ್ನು ಕೇಳಿದಾಗ, ಹತ್ತು ಹಲವು ಕಾನೂನುಗಳನ್ನು ಅಧಿಕಾರಿಗಳು ಹೇಳುತ್ತಾರೆ. ಆದರೆ, ಖಾಸಗಿ ಕಂಪನಿಯೊಂದು ದೊಡ್ಡ ಪ್ರಮಾಣದಲ್ಲಿ ಕಾಮಗಾರಿಯನ್ನು ಅನುಮತಿ ಪಡೆಯದೇ ಮಾಡುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಕಾರಣವಾಗಿದೆ. ತಕ್ಷಣವೇ, ಕಾಮಗಾರಿ ನಿಲ್ಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು.| ಹುಲಗಪ್ಪ ಬಂಡಿವಡ್ಡರ ಅಧ್ಯಕ್ಷ, ಜಯಕರ್ನಾಟಕ ಸಂಘಟನೆ, ನರೇಗಲ್ಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net