

ಕೆ.ಎಂದೊಡ್ಡಿ: ತಾಂತ್ರಿಕ ಪದವೀಧರರು ಸಮಾಜಕ್ಕೆ ಅಗತ್ಯವಾದ ಕೊಡುಗೆ ನೀಡಲು ಮುಂದಾಗಬೇಕು. ಕೃಷಿ ಚಟುವಟಿಕೆಗೆ ಪೂರಕವಾದ ಅನ್ವೇಷಣೆ ನಡೆಸಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಕರೆ ನೀಡಿದರು.
ಇಲ್ಲಿನ ಭಾರತೀ ಎಜುಕೇಷನ್ ಟ್ರಸ್ಟ್‌ನ ಆವರಣದಲ್ಲಿನ ಕುವೆಂಪು ಸಭಾಂಗಣದಲ್ಲಿ ಜಿ.ಮಾದೇಗೌಡ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪದವಿ ಪ್ರಧಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮಾಜಿ ಸಂಸದ ದಿವಂಗತ ಜಿ.ಮಾದೇಗೌಡರು ಮುತ್ಸದ್ದಿಗಳು. ಅವರ ದೂರದೃಷ್ಟಿ ಫಲವೇ ಭಾರತೀ ವಿದ್ಯಾಸಂಸ್ಥೆ. ಗ್ರಾಮೀಣ ಪ್ರದೇಶದಲ್ಲಿ ರೈತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಅವರ ಛಲ ಇಂದು ಸಾರ್ಥಕತೆ ಪಡೆದಿದೆ. ಮಾದೇಗೌಡ ಅವರ ಬಗ್ಗೆ ಕೇಳಿದ್ದೆ. ಆದರೆ, ಅವರನ್ನು ನೋಡುವ ಭಾಗ್ಯ ನನ್ನದಾಗಲಿಲ್ಲ. ಇಂತಹ ಅಭೂತಪೂರ್ವ ಶಿಕ್ಷಣ ಸಂಸ್ಥೆಯ ರೂವಾರಿ ಒಬ್ಬ ಗಾಂಧಿವಾದಿ ಎಂದು ಹೇಳಲು ಸಂತಸವಾಗುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯ, ಭಾರತೀ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ, ಮಧು ಜಿ.ಮಾದೇಗೌಡ ಮಾತನಾಡಿ, ವಿದ್ಯಾರ್ಥಿಗಳು ಪದವಿ ಪಡೆದರಷ್ಟೇ ತಮ್ಮ ಕರ್ತವ್ಯ ನಿಭಾಯಿಸಿದ್ದೇವೆ ಎಂದು ತಿಳಿಯಬಾರದು. ತಾಂತ್ರಿಕ ಶಿಕ್ಷಣ ಪಡೆದದ್ದನ್ನು ಸಾರ್ಥಕಪಡಿಸಿಕೊಳ್ಳಬೇಕಾದರೆ ಇನ್ನೂ ತಮ್ಮ ಜವಾಬ್ದಾರಿಯಿದೆ ಎಂದು ಭಾವಿಸಿ ಮುಂದುವರೆಯಬೇಕು. ಹಾಗಾದಲ್ಲಿ ಉತ್ತಮ ಸಮಾಜ ನಿರ್ಮಾಣವಾಗಲು, ತಾಂತ್ರಿಕತೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಭಾರತೀ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆಂಬುದು ತಿಳಿಯಬೇಕಾದರೆ ಉತ್ತಮ ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ದೇಶದ ಉನ್ನತೀಕರಣಕ್ಕೆ ತಮ್ಮ ಕೊಡುಗೆ ನೀಡಿದಾಗ ಮಾತ್ರ ಅಂತಹ ವಿದ್ಯಾರ್ಥಿಗಳಿಂದ ತಾವು ಕಲಿತ ವಿದ್ಯಾ ಸಂಸ್ಥೆಗೂ ಹೆಸರು ಬರುಲಿದೆ. ಆ ಮಾರ್ಗದಲ್ಲಿ ಎಲ್ಲರೂ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ವಿತರಿಸಿ ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಬಿ.ಎಂ. ನಂಜೇಗೌಡ, ಜಿ. ಮಾದೇಗೌಡ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಆರ್. ಚಂದನ್ ಮಾತನಾಡಿದರು.
ಭಾರತೀ ಎಜುಕೇಷನ್ ಟ್ರಸ್ಟ್ ಹನುಮಂತನಗರ ಕ್ಯಾಂಪಸ್ ಕಾರ್ಯದರ್ಶಿ ಸಿದ್ದೇಗೌಡ, ಟ್ರಸ್ಟಿಗಳಾದ ಚಂದೂಪುರ ಪಾಪಣ್ಣ, ಕಾರ್ಕಹಳ್ಳಿ ಬಸವೇಗೌಡ, ಜಯರಾಮು, ಮುದ್ದಯ್ಯ, ಭಾರತೀ ಕಾಲೇಜು ಪ್ರಾಂಶುಪಾಲ ಪ್ರೊ.ನಾಗೇಂದ್ರ, ಸ್ನಾತಕೋತ್ತರ ವಿಭಾಗದ ನಿರ್ದೇಶಕ ನಾಗರಾಜು, ಬಿಇಡಿ ವಿಭಾಗದ ಪ್ರಾಂಶುಪಾಲ ಸುರೇಶ್, ಪ್ರೊ.ಸಿ. ಸುನಿತಾ, ಡಾ.ನೂತನ್, ಪ್ರೊ.ಎಂ.ಸಿ. ಜಯಕುಮಾರ್, ಪ್ರೊ.ಬಿ.ಎನ್.ಪ್ರದೀಪ್, ಪ್ರೊ.ಮೊಹಿಂದರ್ ಇತರರು ಭಾಗವಹಿಸಿದ್ದರು.