ಕೃಷಿ ಚಟುವಟಿಕೆ ಚುರುಕು

25ark-1
ಅರಕಲಗೂಡು ತಾಲೂಕಿನ ಯಗಟಿ ಬಳಿ ಹೊಲದಲ್ಲಿ ಹೂ ಕೋಸು ಬೆಳೆಯ ಕಳೆ ತೆಗೆಯುತ್ತಿರುವ ರೈತ ಮಹಿಳೆಯರು.
Published on

ಅರಕಲಗೂಡು: ತಾಲೂಕಿನಲ್ಲಿ ಕೆಲ ದಿನಗಳಿಂದ ಉತ್ತಮ ಮಳೆಯಾಗಿದ್ದು ಮುಸುಕಿನ ಜೋಳ, ಆಲೂಗಡ್ಡೆ ಬಿತ್ತನೆ ಸೇರಿದಂತೆ ರೈತಾಪಿ ವರ್ಗದಿಂದ ಕೃಷಿ ಚಟುವಟಿಕೆ ಚುರುಕುಗೊಂಡಿದೆ.

ಮಳೆ ಬಿದ್ದ ಗ್ರಾಮಗಳಲ್ಲಿ ರೈತರು ಬಿತ್ತನೆ ಕಾರ್ಯಕ್ಕಾಗಿ ಭೂಮಿ ಉಳುಮೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಕಳೆದ ಸಾಲಿನಲ್ಲಿ ಮೇ ತಿಂಗಳ ಹೊತ್ತಿಗೆ ಒಂದೆರಡು ಬಾರಿ ಮಳೆಯಾಗಿ ಭೂಮಿ ಉಳುಮೆ ಮಾಡಿ ಬಿತ್ತನೆ ಕಾರ್ಯ ಮುಗಿದಿತ್ತು. ಆದರೆ ಈ ಸಾಲಿನಲ್ಲಿ ಮೇ ತಿಂಗಳವರೆಗೆ ಹದ ಮಳೆಯೇ ಇರಲಿಲ್ಲ. ಹಾಗಾಗಿ ರೈತರು ಪೂರ್ವ ಹಂಗಾಮಿನ ಬಿತ್ತನೆ ಕಾರ್ಯಕ್ಕೆ ಭೂಮಿ ಉಳುಮೆ ಮಾಡಲು ಸಾಧ್ಯವಾಗಿರಲಿಲ್ಲ. ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಟ್ರ್ಯಾಕ್ಟರ್ ಹಾಗೂ ಎತ್ತುಗಳ ಸಹಾಯದಿಂದ ಭೂಮಿ ಉಳುಮೆ ಮಾಡಿ ಬಿತ್ತನೆಗೆ ಅಣಿ ಮಾಡುತ್ತಿದ್ದಾರೆ.

ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಆಲೂಗಡ್ಡೆ, ಮುಸುಕಿನ ಜೋಳ ಬಿತ್ತನೆ ಕಾರ್ಯ ಇದೀಗ ನಡೆಯುತ್ತಿದೆ. ಅರೆಮಲೆನಾಡು ಭಾಗದ ಮಲ್ಲಿಪಟ್ಟಣದಲ್ಲಿ ಭತ್ತದ ಸಸಿ ಮಡಿ ತಯಾರಿಕೆಗೆ ರೈತರು ಭೂಮಿ ಹದ ಮಾಡುತ್ತಿದ್ದಾರೆ. ರಾಮನಾಥಪುರ ಮತ್ತು ಕೊಣನೂರು ಭಾಗದಲ್ಲಿ ತಂಬಾಕು ನಾಟಿ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಗಿಡಗಳಿಗೆ ಗೊಬ್ಬರ, ಔಷಧ ಸಿಂಪಡಣೆ ನಡೆಯುತ್ತಿದೆ.

ತಂಬಾಕು ನಾಟಿ: ಮಳೆಯಾಶ್ರಿತ ಪ್ರದೇಶದ ರೈತರು ಕಡೇ ಹಂತದ ತಂಬಾಕು ನಾಟಿ ಕೆಲಸ ಚುರುಕುಗೊಳಿಸಿದ್ದಾರೆ. ಮತ್ತೆ ಕೆಲವೆಡೆ ತಗ್ಗು ಪ್ರದೇಶದಲ್ಲಿ ಆಲಿಕಲ್ಲು ಸಹಿತ ಜೋರು ಮಳೆಗೆ ಹೊಲದಲ್ಲಿ ನೀರು ನಿಂತು ನಾಟಿಯಾದ ತಂಬಾಕು ಗಿಡಗಳಿಗೆ ಕೊಂಚ ಹಾನಿಯಾಗಿದೆ.

ಸಾಲ ತೀರಿಸುವುದು ಹೇಗೆ?: ಬೇರೆಯವರ ಜಮೀನಿನಲ್ಲಿ ಗುತ್ತಿಗೆ ಹಣ ನೀಡಿ ತಂಬಾಕು ನಾಟಿ ನಡೆಸಿದ್ದೆವು. ಇತ್ತೀಚೆಗೆ ಬಿದ್ದ ಆಲಿಕಲ್ಲು ಮಳೆಗೆ ತಂಬಾಕು ಗಿಡಗಳು ನಾಶವಾಗಿವೆ. ಮರು ನಾಟಿ ನಡೆಸಲು ಸಸಿಗಳು ದೊರೆಯುತ್ತಿಲ್ಲ. ಬೆಳೆ ಬೆಳೆಯಲು ಮಾಡಿದ ಸಾಲ ತೀರಿಸುವುದು ಹೇಗೆಂಬ ಚಿಂತೆ ಮನೆ ಮಾಡಿದೆ ಎಂದು ಹಾನಗಲ್ ಕೊಪ್ಪಲು ರೈತ ತಮ್ಮಯ್ಯ ಅಳಲು ತೋಡಿಕೊಂಡಿದ್ದಾರೆ.
ವಾಣಿಜ್ಯ ಬೆಳೆಗಳಲ್ಲದೆ ಜಮೀನು ಉಳುಮೆ ಮಾಡಿ ಸಿದ್ಧ್ದಪಡಿಸಿಕೊಂಡು ರೈತರು ಹಲವು ಕಡೆ ಮುಸುಕಿನ ಜೋಳ, ಆಲಸಂದೆ, ರಾಗಿ, ದ್ವಿದಳ ಧಾನ್ಯ ಬೆಳೆಗಳ ಬಿತ್ತನೆ ಕಾರ್ಯ ನಡೆಸುತ್ತಿದ್ದಾರೆ.

ಅರಕಲಗೂಡು ತಾಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜೂನ್ 15ವರೆಗೆ 1,500 ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬಿತ್ತನೆ ಗುರಿ ಹೊಂದಲಾಗಿದೆ. ಹಾಸನದ ಎಪಿಎಂಸಿ ಮಾರುಕಟ್ಟೆಯಲ್ಲಿ ಬಿತ್ತನೆ ಆಲೂಗಡ್ಡೆ ಮಾರಾಟ ನಡೆಯುತ್ತಿದ್ದು, ಕೊಳ್ಳಲು ರೈತರು ನಿರಾಸಕ್ತಿ ತೋರಿದ್ದಾರೆ. ತಾಲೂಕಿನಲ್ಲಿ ಈಗಾಗಲೇ ಬಿತ್ತನೆ ಕಾರ್ಯ ಶುರು ಮಾಡಿದ್ದು ಸುಮಾರು 400 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪ್ರಗತಿ ಹಂತದಲ್ಲಿದೆ.
ರಾಜೇಶ್ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ

ಅರಕಲಗೂಡು ತಾಲೂಕಿನಲ್ಲಿ ಮಳೆಯಿಂದಾಗಿ ರೈತರು ಕೃಷಿ ಕಾಯಕ ಚುರುಕುಗೊಳಿಸಿದ್ದಾರೆ. ಈ ಬಾರಿ ತಾಲೂಕಿನಲ್ಲಿ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡುವ ಗುರಿ ಇದೆ. ಸದ್ಯಕ್ಕೆ 1,200 ಹೆಕ್ಟೇರ್ ಜಮೀನಿನಲ್ಲಿ ಬಿತ್ತನೆಯಾಗಿದೆ. ಮುಂಗಾರು ಹಂಗಾಮಿನಲ್ಲಿ ನಿಗದಿತ ಪ್ರಮಾಣದ ಗುರಿ ತಲುಪಲಿದೆ.
ರಮೇಶ್ ಕುಮಾರ್ ಸಹಾಯಕ ಕೃಷಿ ನಿರ್ದೇಶಕ ಅರಕಲಗೂಡು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net