ಕೃಷಿ ಚಟುವಟಿಕೆ ಕೈಗೊಳ್ಳಲು ಅನುಕೂಲ, ಶಾಸಕ ನಿಸರ್ಗ ನಾರಾಯಣಸ್ವಾಮಿ ಅಭಯ

J.28 dhl sC ST MLA Sabhe news ph -1
Published on

ದೇವನಹಳ್ಳಿ: ಜಿಲ್ಲಾಧಿಕಾರಿ ಅವರ ಜತೆ ಚರ್ಚಿಸಿ, ಗಡಿ ಭದ್ರತಾ ಪಡೆ ಅಧಿಕಾರಿಗಳ ಜತೆ ಮಾತುಕತೆ ನಡೆಸಿ, ಬಿಎಸ್‌ಎ್ ಶಿಬಿರ ವ್ಯಾಪ್ತಿಯಲ್ಲಿರುವ ಜಮೀನಿಗೆ ಹೋಗಿಬರಲು, ಕೃಷಿ ಚಟುವಟಿಕೆ ಕೈಗೊಳ್ಳಲು ಎಸ್‌ಸಿ, ಎಸ್‌ಟಿ ಸೇರಿ ಎಲ್ಲ ರೈತರಿಗೂ ಅವಕಾಶ ಮಾಡಿಕೊಡುವಂತೆ ಶಾಸಕ ನಿಸರ್ಗ ನಾರಾಯಣಸ್ವಾಮಿ ತಹಸೀಲ್ದಾರ್ ಅನಿಲ್‌ಕುಮಾರ್ ಅರೋಳಿಕರ್ ಅವರಿಗೆ ಸೂಚನೆ ನೀಡಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಎಸ್‌ಸಿ, ಎಸ್‌ಟಿ ಸಮುದಾಯದ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.

ಬಿಎಸ್‌ಎ್ ಶಿಬಿರದೊಳಗೆ ನೂರಾರು ಎಕರೆ ಕೃಷಿ ಭೂಮಿ ಇದೆ. ಮೊದಲು ಹೊಲಗದ್ದೆಗಳಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ಯೋಧರು ಅವಕಾಶ ಮಾಡಿಕೊಡುತ್ತಿದ್ದರು. ಆದರೆ, ಈಗ ತಮ್ಮ ಕಾರ್ಯವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿರುವ ಅವರು, ಹೊಲಗದ್ದೆಗಳಿಗೆ ಹೋಗಿಬರಲು ಅಡ್ಡಿ ಮಾಡುತ್ತಿದ್ದಾರೆ. ಇದರಿಂದ ಭಾರಿ ತೊಂದರೆಯಾಗುತ್ತಿದೆ ಎಂದು ರೈತರು ಅಲವತ್ತುಕೊಂಡಿದ್ದರು.

ಇದಲ್ಲದೆ, ರಸ್ತೆ ಕಾಮಗಾರಿ ವಿಳಂಬದಿಂದ ಅಫಘಾತಗಳು ಹೆಚ್ಚಾಗುತ್ತಿವೆ, ಸ್ಮಶಾನವನ್ನು ಒತ್ತುವರಿ ಮಾಡಿಕೊಳ್ಳಲಾಗಿದ್ದು, ಶವಸಂಸ್ಕಾರಕ್ಕೆ ಜಾಗವಿಲ್ಲದಂತೆ ಆಗಿದೆ, ಕಾಲನಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಇದನ್ನು ತಡೆಗಟ್ಟಬೇಕು, ಪಟ್ಟಣ ವ್ಯಾಪ್ತಿಯಲ್ಲಿ ಹೆಲ್ಮೆಟ್ ಹಾಕದವರಿಗೆ ಪೊಲೀಸರು ಅನಗತ್ಯ ಕಿರುಕುಳ ನೀಡುತ್ತಿದ್ದು, ಇದನ್ನು ತಪ್ಪಿಸಬೇಕು ಎಂದು ಎಸ್‌ಸಿ, ಎಸ್‌ಟಿ ಸಮುದಾಯದವರು ಮನವಿ ಮಾಡಿಕೊಂಡರು.

ಅಧಿಕಾರಿಗಳ ಗೈರು: ವಿವಿಧ ಇಲಾಖೆಗಳ ಅಧಿಕಾರಿಗಳು ಕುಂದುಕೊರತೆ ಸಭೆಗೆ ಗೈರಾಗಿದ್ದರು. ಸಂಚಾರ ಪೊಲೀಸರು, ಟೌನ್ ಹಾಗೂ ಅಂತಾರಾಷ್ಟ್ರೀಯ ವಿಮನ ನಿಲ್ದಾಣ ಠಾಣೆಯ ಪೊಲೀಸರು ಎಂದಿಗೂ ಸಭೆಗೆ ಬರುವುದಿಲ್ಲ ಎಂಬ ಆರೋಪಗಳು ಕೇಳಿಬಂದವು. ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿದ್ದವರು ಆಗ್ರಹಿಸಿದರು. ಪಟ್ಟಣದ ವ್ಯಾಪ್ತಿಯಲ್ಲಿ ಓಡಾಡುವಾಗ ಹೆಲ್ಮೆಟ್ ಧರಿಸಲು ವಿನಾಯಿತಿ ಕೊಡಿಸುವಂತೆ ದ್ವಿಚಕ್ರವಾಹನ ಸವಾರರ ಪರ ಪುರಸಭೆ ಮಾಜಿ ಸದಸ್ಯ ಆರ್. ಕುಮಾರ್ ಕೋರಿದರು.

ಜಾತಿನಿಂದನೆ ದೂರು: ಎಸ್‌ಸಿ, ಎಸ್‌ಟಿ ಕುಂದು ಕೊರತೆ ಸಭೆಗೆ ಅಧಿಕಾರಿಗಳು ಬಾರದೆ ಗೈರುಹಾಜರಾದರೆ ಅದು ಜಾತಿನಿಂದನೆ ಪ್ರಕರಣವಾಗುತ್ತದೆ. ಆದ್ದರಿಂದ, ಅಧಿಕಾರಿಗಳಿಗೆ ನೋಟಿಸ್ ನೀಡಿ, ಮುಂದಿನ ಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಲಾಗುವುದು ಎಂದು ತಹಸೀಲ್ದಾರ್ ಅನಿಲ್‌ಕುಮಾರ್ ಅರೋಳಿಕರ್ ಹೇಳಿದರು.

ಬ್ಯಾರಿಕೇಡ್ ತೆರವುಗೊಳಿಸಿ: ಕನ್ನಮಂಗಲ ಗೇಟ್ ಬಳಿ ಗ್ರಾಮದ ತಿರುವಿನ ಹೆದ್ದಾರಿಯನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ. ಇದರಿಂದ, ಗ್ರಾಮಕ್ಕೆ ಹೋಗಿಬರಲು ತೊಂದರೆಯಾಗುತ್ತಿದೆ. ಆದ್ದರಿಂದ, ಬ್ಯಾರಿಕೇಡ್ ತೆರವುಗೊಳಿಸಿ, ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.

ಅಬಕಾರಿ ಇಲಾಖೆಯಿಂದಲೇ ಕುಮ್ಮಕ್ಕು: ವಿವಿಧ ಕಾಲನಿಗಳಲ್ಲಿ ಅಕ್ರಮ ಮದ್ಯ ಮಾರಾಟ ಹಾವಳಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಅಬಕಾರಿ ಇಲಾಖೆಯವರೇ ಕುಮ್ಮಕ್ಕು ಕೊಡುತ್ತಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪುರಸಭೆಯ ಮಾಜಿ ಅಧ್ಯಕ್ಷ ಎಂ. ಮೂರ್ತಿ ಒತ್ತಾಯಿಸಿದರು.

ತಿಂಡ್ಲು ಸರ್ಕಲ್ ಮಾರ್ಗವಾಗಿ ಕುಂದಾಣ ರಸ್ತೆಯಿಂದ ಸ್ಟೋನ್ ಹಿಲ್ಸ್‌ವರೆಗೆ ರಸ್ತೆ ದುರಸ್ತಿ ಕಾರ್ಯ ಕೈಗೊಂಡು ಹಲವು ವರ್ಷಗಳೇ ಕಳೆದರೂ ಕಾಮಗಾರಿ ಮುಗಿದಿಲ್ಲ. ಇದರಿಂದ ಅಪಘಾತಗಳು ಹೆಚ್ಚಾಗುತ್ತಿದ್ದು, ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ತ್ವರಿತವಾಗಿ ಕಾಮಗಾರಿ ಕೈಗೊಂಡು, ಈ ಸಮಸ್ಯೆ ಪರಿಹರಿಸಲು ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಬೇಕು. ಕೆ.ವಿ. ಸ್ವಾಮಿ, ಗ್ರಾಪಂ ಸದಸ್ಯ ಭಂಡರಾಮನಹಳ್ಳಿ ರೈತರು ಸಾಗುವಳಿಚೀಟಿಗಾಗಿ ಸಲ್ಲಿಸಿದ್ದ ಅರ್ಜಿಗಳ ಕಡತ ಕಾಣೆಯಾಗಿದೆ. ಕೂಡಲೆ ಅದನ್ನು ಪತ್ತೆ ಹಚ್ಚಿ, ಸಾಗುವಳಿಚೀಟಡಿ ನೀಡಬೇಕು. ಇಲ್ಲವೇ ಹಿಂಬರವನ್ನು ನೀಡಿದರೆ, ಅವರು ನ್ಯಾಯಾಲಯಕ್ಕೆ ಹೋಗುತ್ತಾರೆ. ನಿಸರ್ಗ ನಾರಾಯಣಸ್ವಾಮಿ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net