ಕೃಷಿ ಚಟುವಟಿಕೆ ಕುಂಠಿತ, ದಲಿತ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊಫೆಸರ್ ಚಂದ್ರಪ್ಪ ಬೇಸರ, ಅನ್ನಕ್ಕಾಗಿ ಪರದಾಡುವ ಸ್ಥಿತಿ ಬರುವ ಎಚ್ಚರಿಕೆ

26-vij-4a-jilla sahitya sammelana-utsvagalu
Published on

ವಿಜಯಪುರ: ಯುವಪೀಳಿಗೆೆ ನಗರ ಪ್ರದೇಶಗಳತ್ತ ವಲಸೆ ಹೋಗುವ ಕಾರಣ ಕೃಷಿ ಚಟುವಟಿಕೆ ಮೇಲೆ ಹೊಡೆತ ಬಿದ್ದಿದೆ. ಮುಂದೊಂದು ದಿನ ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ ಬರಲಿದೆ ಎಂದು ಜಿಲ್ಲಾ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊಫೆಸರ್ ಚಂದ್ರಪ್ಪ ಹೇಳಿದರು.

ಪಟ್ಟಣದ ಗಂಗಾತಾಯಿ ದೇವಾಲಯ ಆವರಣದಲ್ಲಿ ದಿವಂಗತ ವೈ.ಸಿ.ಸತೀಶ್ ಮಂಟಪದಲ್ಲಿ ಜಿಲ್ಲಾ ಕಸಾಪ, ತಾಲೂಕು ಕಸಾಪ ಹಾಗೂ ಅಖಿಲ ಕರ್ನಾಟಕ ಮಿತ್ರ ಸಂಘದ ಸಹಕಾರದೊಂದಿಗೆ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ, ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ, ತಾಲೂಕು ರಜತ ಮಹೋತ್ಸವ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಾಹಿತ್ಯ ಸಮ್ಮೇಳನ, ಜಿಲ್ಲಾ ಶಿಕ್ಷಕರ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.

ಜಿಲ್ಲಾ ಉತ್ಸವಾಧ್ಯಕ್ಷ ದೊಡ್ಡಬಳ್ಳಾಪುರದ ಎಸ್.ಪ್ರಕಾಶ್ ಮಾತನಾಡಿ, ನಾಗರಿಕತೆ ಬೆಳೆದಂತೆ ಭಾಷೆ ಮೇಲಿನ ಒಲವು ಕಡಿಮೆ ಆಗುತ್ತಿದೆಯೇನೋ ಎಂಬ ಭಾವನೆ ಮೂಡುತ್ತಿದೆ. ಈ ನಡುವೆ ಕೇಂದ್ರ ಸರ್ಕಾರ ಹಿಂದಿ ಭಾಷೆ ಹೇರುತ್ತಿರುವುದು ನೋವಿನ ಸಂಗತಿ ಎಂದರು.

ಜಿಲ್ಲಾ ಮಹಿಳಾ ಕಸಾಪ ಸಮ್ಮೇಳನಾಧ್ಯಕ್ಷೆ, ಪತ್ರಕರ್ತೆ ಸುನಂದ ರು.ಬಸಪ್ಪ ಮಾತನಾಡಿ, ಖಾಸಗಿ ಶಾಲೆಗಳ ಪ್ರೀತಿಯಿಂದ ಡೊನೇಷನ್ ಕೊಟ್ಟು ಇಂಗ್ಲಿಷ್ ಶಿಕ್ಷಣ ಪಡೆಯುವುದರಿಂದ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವೇ ಎಂದು ಪ್ರಶ್ನಿಸಿಸಿದರು.

ದೇವನಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಕವಯತ್ರಿ ಸ್ವರ್ಣಗೌರಿ ಮಹದೇವ್ ಮಾತನಾಡಿ, ಕನ್ನಡವನ್ನು ಶಾಸ್ತ್ರಿಯ ಭಾಷೆಯಾಗಿ ಪರಿಗಣಿಸಿದ್ದರೂ ಕೇಂದ್ರ ಸರ್ಕಾರದಿಂದ ಅದಕ್ಕೆ ಸಿಗಬೇಕಾದ ಸ್ಥಾನಮಾನ, ಸೌಲಭ್ಯ ಸಿಗದಿರುವುದು ದುರಂತ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಿ.ಮಾ.ಸುಧಾಕರ್ ಮಾತನಾಡಿ, ಸಾಹಿತ್ಯ ಗ್ರಾಮೀಣ ಪ್ರದೇಶಕ್ಕೆ ಸಾಗಬೇಕು ಎನ್ನುವ ಉದ್ದೇಶದಿಂದ ತಾಲೂಕು ಘಟಕಗಳ ಸ್ಥಾಪನೆ ಮಾಡಲಾಗಿದೆ ಎಂದರು.

ತಾಲೂಕು ಉತ್ಸವಾಧ್ಯಕ್ಷ ಕೆ.ಸಿ.ಮಂಜುನಾಥ್, ಮಾತನಾಡಿ, ಕನ್ನಡ ಭಾಷೆ ವಿಸ್ತಾರವಾಗಿ ಬೆಳೆಯಬೇಕು, ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸುವಂತಹ ಕೆಲಸವನ್ನು ಪ್ರತಿಯೊಬ್ಬ ಸಾಹಿತ್ಯ ಪ್ರೇಮಿ, ಕನ್ನಡಿಗ ಮಾಡಬೇಕು ಎಂದರು.

ಈ ಹಿಂದಿನ ಸಮ್ಮೇಳನಾಧ್ಯಕ್ಷ ಬೆ.ಕಾ.ಮೂರ್ತಿಶ್ವರಯ್ಯ ಅವರ ಅನುವಾದಿತ ಪುಸ್ತಕ ವ್ಯಕ್ತಿಯ ಅರವಿನಂತೆ ವ್ಯಕ್ತಿತ್ವ’ ಪುಸ್ತಕ ಬಿಡುಗಡೆ ಮಾಡಲಾಯಿತು. ವಿ.ಎಂ.ನಾಯ್ಡು ತಂಡದಿಂದ ನಾಡಗೀತೆ, ರೈತ ಗೀತೆ, ಮತ್ತಿತರೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಮಾಜಿ ಶಾಸಕ ಜಿ.ಚಂದ್ರಣ್ಣ, ಜಿಲ್ಲಾ ನೌಕರರ ಸಾಹಿತ್ಯ ಸಮ್ಮೇಳನಾಧ್ಯಕ್ಷ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ವಿಜಯಕುಮಾರ್, ಜಿಲ್ಲಾ ಶಿಕ್ಷಕರ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕಾಂತ್‌ರಾಜ್, ತಾಲೂಕು ಕಸಾಪ ಅಧ್ಯಕ್ಷ ನಂಜೇಗೌಡ, ಜಿಲ್ಲಾ ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಪುನೀತಾ ನಟರಾಜು, ತಾಲೂಕು ಘಟಕದ ಅಧ್ಯಕ್ಷೆ ಮಾಧವಿ ಕಾಂತರಾಜ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net