ಕೃಷಿ ಕೂಲಿ ಕಾರ್ಮಿಕರಿಗೆ ಡಿಮಾಂಡ್

10-09kod01
ವಾಹನ ಮೇಲೆ ಕುಳಿತು ಕೂಲಿ ಕೆಲಸಕ್ಕೆ ಹೋಗುತ್ತಿರುವ ಕಾರ್ಮಿಕರು.
Published on

ಪವನ ದೇಶಪಾಂಡೆ ಕೊಡೇಕಲ್: ಕಳೆದ ವಾರ ವಲಯದಲ್ಲಿ ಉತ್ತಮ ಮಳೆಯಾದ ಕಾರಣ ಬಿತ್ತನೆ ಮಾಡಿದ ಹತ್ತಿ, ತೊಗರಿ, ಸಜ್ಜೆ ಮತ್ತು ಮೆಣಸಿಕಾಯಿ ಬೆಳೆಗಳಲ್ಲಿನ ಕಳೆ ತೆಗೆಯಲು ಕೂಲಿ ಕಾರ್ಮಿಕರು ಸಿಗದೆ ರೈತರು ಹೈರಾಣ ಆಗುವಂತಾಗಿದೆ.

ಒಂದು ವರ್ಷದಿಂದ ಕೃಷಿ ಕಾರ್ಯಗಳಿಗೆ ಕಾರ್ಮಿಕರು ಸಿಗುವುದು ಕಷ್ಟಕರವಾಗಿದೆ. ಸದ್ಯ ಮಳೆ ವಿರಾಮ ನೀಡಿದ್ದು, ಬೆಳೆಗಳ ನಡುವಿನ ಕಳೆ ತೆಗೆಸಲು ಮನೆ ಮನೆಗೆ ಹೋಗಿ ಕಾರ್ಮಿಕರನ್ನು ಹುಡುಕುವುದು ರೈತರ ನಿತ್ಯದ ಕಾಯಕವಾಗಿದೆ. ಸಿಕ್ಕರೂ ಅವರ ಕರಾರುಗಳನ್ನು ಕೇಳಿ ಬೆಚ್ಚಿಬೀಳುತ್ತಿದ್ದಾರೆ. ಈ ಹಿಂದೆ ಒಬ್ಬರನ್ನು ಕೆಲಸಕ್ಕೆ ಕರೆದರೆ ಪಕ್ಕದ ಮನೆಯವರು ನಾವು ಬರುತ್ತೇವೆ ಎನ್ನುತ್ತಿದ್ದರು. ಆದರೀಗ ಕೆಲಸಕ್ಕೆ ಬರುವ ಮುನ್ನ ತಮ್ಮ ಷರತ್ತುಗಳನ್ನು ಒಪ್ಪಿದರೆ ಮಾತ್ರ ಬರುವಂಥ ಸ್ಥಿತಿ ನಿರ್ಮಾಣವಾಗಿದೆ.

ಹೊಲಗಳಲ್ಲಿ ಕಳೆ ತೆಗೆಯಲು ಸಾಮಾನ್ಯವಾಗಿ ದಿನಕ್ಕೆ ಪುರುಷರಿಗೆ ೩೦೦ ಹಾಗೂ ಮಹಿಳೆಯರಿಗೆ ೨೦೦ ರೂ. ಕೂಲಿ ನೀಡಬೇಕಾಗಿದೆ. ಅಲ್ಲದೆ ಕಾರ್ಮಿಕರನ್ನು ಬೆಳಗ್ಗೆ ಜಮೀನುಗಳಿಗೆ ಕರೆದುಕೊಂಡು ಹೋಗಿ ಮತ್ತೆ ಸಂಜೆ ಮನೆಗೆ ಕಳುಹಿಸಲು ವಾಹನ ವ್ಯವಸ್ಥೆ ಸಹ ರೈತರೇ ಮಾಡಬೇಕಿದೆ. ಇದರಿಂದಾಗಿ ಕೃಷಿಕರು ಕೃಷಿ ಮಾಡಲು ಹಿಂದೇಟು ಹಾಕುವಂತಹ ಸ್ಥಿತಿ ಸೃಷ್ಟಿಯಾಗಿದೆ.

ಮಕ್ಕಳು ಕೂಲಿಗೆ: ಹಣದ ಆಸೆಗಾಗಿ ಪಾಲಕರು ಮಕ್ಕಳನ್ನು ಶಾಲೆ ಬಿಡಿಸಿ ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿದೆ. ವಾಹನಗಳಲ್ಲಿ ಹೆಚ್ಚು ಜನರನ್ನು ತುಂಬಿ ಅಪಾಯಕಾರಿ ಪ್ರಯಾಣಕ್ಕೆ ಮುಂದಾಗುತ್ತಿರುವುದು ಆತಂಕ ಸೃಷ್ಟಿಸಿದೆ.

ವ್ಯವಸಾಯ ಗಂಭೀರವಾಗೈತ್ರಿ, ಈಗಾಗಲೇ ಬಿತ್ತನೆ ಇತರ ಕೃಷಿ ಕಾರ್ಯಗಳಿಗೆ ಸಾಲ ಮಾಡಿ ಹಣ ಹಾಕಿದ್ದೇವೆ. ಈಗ ಕಾರ್ಮಿಕರು ಸಿಗುವಲ್ರು. ಸಿಕ್ಕರೂ ಕೂಲಿ ಹಣ ಭಾಳ ಆಗೈತಿ. ಇದರಿಂದ ವ್ಯವಸಾಯ ಮಾಡುವುದೇ ಕಠಿಣವಾಗಿದೆ.
| ಪ್ರಭು ಚಲುವಾದಿ ಬೂದಿಹಾಳ ಗ್ರಾಮದ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net