ಎಚ್.ಡಿ.ಕೋಟೆ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೇಟಿಕುಪ್ಪೆ ಅರಣ್ಯ ವ್ಯಾಪ್ತಿಯ ಅಗಸನಹುಂಡಿ ಗ್ರಾಮದಲ್ಲಿ ಬುಧವಾರ ಕೃಷಿ ಕೂಲಿ ಕಾರ್ಮಿಕನ ಮೇಲೆ ಹುಲಿ ದಾಳಿ ಮಾಡಿ ಗಾಯಗೊಳಿಸಿದೆ.
ತಾಲೂಕಿನ ಹಿರೇಹಳ್ಳಿ ಬಿ ಕಾಲೋನಿ ಗ್ರಾಮದ ಮುನಿಸ್ವಾಮಿ ಹುಲಿ ದಾಳಿಗೆ ಒಳಗಾದ ಕೃಷಿ ಕಾರ್ಮಿಕ. ತಾಲೂಕಿನ ಅಗಸನ ಹುಂಡಿ ಗ್ರಾಮದ ಗಿರಿ ಎಂಬುವವರ ಬಾಳೆಯ ತೋಟದಲ್ಲಿ ನಾಲ್ಕು ಜನ ಕೃಷಿ ಕಾರ್ಮಿಕರೊಂದಿಗೆ ಕೆಲಸ ಮಾಡುತ್ತಿದ್ದಾಗ ಮುನಿಸ್ವಾಮಿ ಮೇಲೆ ಹುಲಿ ದಾಳಿ ನಡೆಸಿ ಗಾಯಗೊಳಿಸಿದೆ.
ಈ ಸಂದರ್ಭದಲ್ಲಿ ಚೀರಾಡಲಾಂರಭಿಸಿದಾಗ ಪಕ್ಕದಲ್ಲಿದ್ದ ಕಾರ್ಮಿಕರು ಓಡಿ ಬಂದಿದ್ದಾರೆ. ಜನರನ್ನು ಕಂಡು ತಕ್ಷಣ ಹುಲಿ ಪೊದೆಯೊಳಗೆ ಸೇರಿಕೊಂಡಿತು. ಗಾಯಗೊಂಡ ಮುನಿಸ್ವಾಮಿ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ.
ಘಟನೆಯಿಂದ ಮುನಿಸ್ವಾಮಿ ಕೈ ಬೆರಳುಗಳಿಗೆ ತೀವ್ರ ಗಾಯವಾಗಿದೆ. ಹುಲಿ ದಾಳಿ ಘಟನೆ ಹಿನ್ನೆಲೆಯಲ್ಲಿ ಮೇಟಿಕುಪ್ಪೆ ವನ್ಯಜೀವಿ ವಲಯ ವ್ಯಾಪ್ತಿಯ ಆರ್‌ಎಫ್‌ಒ ಹರ್ಷಿತ್‌ಗೌಡ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಹುಲಿ ಹೆಜ್ಜೆ ಗುರುತು ಜಾಡು ಹಿಡಿದು ಹುಡುಕಾಟ ನಡೆಸಿದರು. ಸ್ಥಳದಲ್ಲಿ ನಾಲ್ಕು ಕ್ಯಾಮರಾಗಳನ್ನು ಅಳವಡಿಸಿದ್ದು ಹುಲಿಯ ಚಲನವಲನ ಗಮನಿಸಲು ಅರಣ್ಯ ಇಲಾಖೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.