ಕೃಷಿ ಕಾಲೇಜಿನಿಂದ ರೈತರ ಮಕ್ಕಳಿಗೆ ಅನುಕೂಲ

18Athanigrameen1 SPONCER
Published on

ಅಥಣಿ ಗ್ರಾಮೀಣ: ಕೃಷಿ ಕಾಲೇಜು ನಿರ್ಮಾಣಕ್ಕೆ ಸರ್ಕಾರ ಆದೇಶ ನೀಡಿದ್ದು, ಈ ನಿಟ್ಟಿನಲ್ಲಿ ೫೬೨.೫೦ ಕೋಟಿ ರೂ. ವೆಚ್ಚದಲ್ಲಿ ಕೃಷಿ ಕಾಲೇಜು ನಿರ್ಮಿಸಲಾಗುತ್ತಿದೆ. ಅಥಣಿ ತಾಲೂಕಿನಲ್ಲಿ ಕೃಷಿ ಕಾಲೇಜು ಆರಂಭಿಸಬೇಕೆಂಬ ಬಹುದಿನದ ಕನಸು ನನಸಾಗುತ್ತಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯ ನಿರ್ಮಾಣ ಹಾಗೂ ಕೃಷಿಗೆ ಸಂಬಂದಿಸಿದ ಜಮೀನು ಪರಿಶೀಲನೆಗೆ ಆಗಮಿಸಿದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ತಜ್ಞರ ಜತೆ ಶುಕ್ರವಾರ ಸಭೆ ನಡೆಸಿ ಮಾತನಾಡಿದರು.

ಮೂರು ಹಂತಗಳಲ್ಲಿ ನಿರ್ಮಾಣ: ವರ್ಗ ಕೊಠಡಿ, ವಸತಿ ನಿಲಯ, ಸುಸಜ್ಜಿತ ಮೈದಾನ ಹೀಗೆ ಮೂರು ಹಂತಗಳಲ್ಲಿ ಕೃಷಿ ಕಾಲೇಜು ಪ್ರಾರಂಭವಾಗಲಿದೆ. ಈ ಕಾಲೇಜು ಎದುರು ಕಳೆದ ವರ್ಷ ಪಶುವೈದ್ಯಕೀಯ ಮಹಾವಿದ್ಯಾಲಯ ಪ್ರಾರಂಭಿಸಲಾಗಿತ್ತು. ಈ ಎರಡು ಕಾಲೇಜುಗಳು ರೈತರ ಮಕ್ಕಳಿಗೆ ಅನುಕೂಲವಾಗಲಿವೆ ಎಂದು ತಿಳಿಸಿದರು.

ಬಳಿಕ ಪಶು ವೈದ್ಯಕೀಯ ವಿಶ್ವವಿದ್ಯಾಲಯ ವೀಕ್ಷಿಸಿ ಸ್ವಚ್ಛತೆ, ಸಸಿಗಳ ಪೋಷಣೆ ಕುರಿತು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು, ಶುಚಿತ್ವ ಹಾಗೂ ಒಳ್ಳೆಯ ಪರಿಸರ ನಿರ್ಮಿಸುವಂತೆ ಸೂಚಿಸಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಜೆ.ಎಚ್. ಕುಲಕರ್ಣಿ ಹಾಗೂ ವಿಶ್ರಾಂತ ಪ್ರಭಾರ ಕುಲಪತಿ ಡಾ. ವಿ.ಐ. ಬೆಣಗಿ ಮಾತನಾಡಿ, ಕೃಷಿ ವಿವಿ ನಿರ್ಮಾಣ ಮಾಡುತ್ತಿರುವ ಜಮೀನು ಕಾಲೇಜು ಕಟ್ಟಡಕ್ಕೆ ಸೂಕ್ತವಾಗಿದೆ. ಈ ಪ್ರದೇಶ ಸೋಯಾಬೀನ್, ತೊಗರಿ, ಉದ್ದು, ಮೆಕ್ಕೆಜೋಳ, ಕಬ್ಬು ಬೆಳೆಯಲು ಯೋಗ್ಯವಾಗಿದೆ. ಇಲ್ಲಿ ಕೃಷಿ ಕಾಲೇಜು ನಿರ್ಮಾಣದಿಂದ ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಯ ರೈತರ ಮಕ್ಕಳಿಗೆ ಅನುಕೂಲವಾಗಲಿದೆ. ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅಧಿಕಾರಿ ಮನ್ಸೂರ ಮುಲ್ಲಾ, ಬೆಳಗಾವಿ ಕೃಷಿ ಜಂಟಿನಿರ್ದೇಶಕ ಎಚ್.ಡಿ. ಕೊಳೆಕರ, ತಹಸೀಲ್ದಾರ್ ಸಿದ್ದರಾಯ ಬೋಸಗಿ, ಪಶುವೈದ್ಯಕೀಯ ಕಾಲೇಜು ಡೀನ್ ವಿಜಯಕುಮಾರ ಶೆಟ್ಟರ, ತಾಲೂಕು ಕೃಷಿ ಇಲಾಖೆ ಅಧಿಕಾರಿಗಳಾದ ನಿಂಗಪ್ಪ ಬಿರಾದಾರ, ಯಂಕಪ್ಪ ಉಪ್ಪಾರ, ಕಂದಾಯ ನಿರೀಕ್ಷಕ ಸಂಜೀವ ರಾಠೋಡ, ಗ್ರಾಮಾಡಳಿತಾಽಕಾರಿ ಕಲ್ಮೇಶ ಕಲಮಡಿ, ಪಿಡಿಒ ಸಿದ್ದಪ್ಪ ತುಂಗಳ, ಜಯಪಾಲ ದುರ್ಗಣ್ಣವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net