ಕೃಷಿ ಕಾಯ್ದೆಯಿಂದ ರೈತರಿಗೆ ಸ್ವಾತಂತ್ರ್ಯ

DSC_0108
Published on

ಬೀದರ್: ಸಂಸತ್ ನಲ್ಲಿ ಅಂಗೀಕಾರಗೊಂಡ ರೈತರ (ಕಲ್ಯಾಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ ಮಸೂದೆಯಿಂದ ರೈತರಿಗೆ ಸ್ವಾತಂತ್ರ್ಯ ಸಿಕ್ಕಂತಾಗಿದೆ ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಶಾಂತವೀರ ಕೇಸ್ಕರ್ ಹೇಳಿದರು.

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅನುಮೋದನೆ ಪಡೆದ ಈ ನೂತನ ಮಸೂದೆಯಿಂದ ರೈತರಿಗೆ ಹಾಗೂ ವ್ಯಾಪಾರಿಗಳಿಗೆ ತಮಗೆ ಇಷ್ಟ ಬಂದ ಕಡೆ ಕೃಷಿ ಉತ್ಪನ್ನ ಮಾರಾಟ ಹಾಗೂ ಖರೀದಿ ಮಾಡುವ ಸ್ವಾತಂತ್ರ್ಯ ನೀಡಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸತಂತ್ರ ಭಾರತದಲ್ಲಿ ಮೊದಲ ಬಾರಿಗೆ ರೈತರಿಗೆ ತಮ್ಮ ಉತ್ಪನ್ನಗಳನ್ನು ಯಾವುದೇ ಮಧ್ಯವರ್ತಿ ಹಾವಳಿಯಿಲ್ಲದೆ ದೇಶದ ಯಾವುದೇ ಭಾಗದಲ್ಲಿ ಉತ್ತಮ ಬೆಲೆಗೆ ಮಾರಾಟ ಮಾಡಬಹುದಾಗಿದೆ. ಕನಿಷ್ಠ ಬೆಂಬಲ ಬೆಲೆ ಮುಂದುವರಿಯಲಿದ್ದು, ರೈತರು ಆಹಾರ ತಯಾರಿಕಾ ಕೈಗಾರಿಕೆಗಳೊಂದಿಗೆ ನೇರ ಒಪ್ಪಂದ ಮಾಡಿ ತಮ್ಮ ಇಚ್ಛಿತ ಬೆಲೆಯನ್ನು ಪಡೆಯಬಹುದಾಗಿದೆ ಎಂದರು.

ಜಿಲ್ಲಾದ್ಯಂತ ಪ್ರಸಕ್ತ ವರ್ಷ ಸಾಕಷ್ಟು ಉತ್ತಮ ಮಳೆಯಾಗಿದೆ. ಹೀಗಾಗಿ ಕೊಳವೆಬಾವಿ ಕೊರೆಯಲು ಇದ್ದ ತಡೆಯನ್ನು ಜಿಲ್ಲಾಡಳಿತ ತೆಗೆದು ಹಾಕಬೇಕು. ಈ ಕುರಿತು ಜಿಲ್ಲಾಧಿಕಾರಿಗೆ ಭೇಟಿಯಾಗಿ ಮನವಿ ಸಲ್ಲಿಸಲಾಗುವುದು.

ರೈತರಿಗೆ ಮೋಸ ಮಾಡುತ್ತಿದ್ದ ಮಧ್ಯವರ್ತಿಗಳು, ಖರೀದಿದಾರರ ಪರವಾಗಿರುವ ಪ್ರತಿಪಕ್ಷಗಳು ರೈತರ ಪರ ಕಾಯ್ದೆಗೆ ವಿರೋಧ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಈ ಕಾಯ್ದೆಯಿಂದ ಅನ್ನದಾತರಿಗೆ ಬಲ ಬಂದಿದೆ. ಕೃಷಿ ಕ್ಷೇತ್ರ ಪಾರದರ್ಶಕವಾಗಲಿದೆ ಎಂದು ಹೇಳಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರಹಂತ ಸಾವಳೆ, ವಕ್ತಾರ ಶಿವಪುತ್ರ ವೈದ್ಯ, ಮಾಧ್ಯಮ ಪ್ರಮುಖ ಬಸವರಾಜ ಜೋಜನಾ, ರಾಜಕುಮಾರ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net