ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ

pressmeet
ಮಹಾಲಿಂಗಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದಲಾಲ ವರ್ತಕರ ಸಂಘದ ಅಧ್ಯಕ್ಷ ಮಹಾಲಿಂಗಪ್ಪ ಕೋಳಿಗುಡ್ಡ ಮಾತನಾಡಿದರು. ಉಪಾಧ್ಯಕ್ಷ ಬಾಳಕೃಷ್ಣ ಮಾಳವದೆ, ಅಶೋಕ ಅಂಗಡಿ ಇದ್ದರು.
Published on

ಮಹಾಲಿಂಗಪುರ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮಾರಕ ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ರಾಜ್ಯ ಸರ್ಕಾರದ ಮನವೊಲಿಸಲು ಆ. 28 ರಂದು ವಿವಿಧ ಸಂಘಟನೆಗಳೊಂದಿಗೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು ದಲಾಲ ವರ್ತಕರ ಸಂಘದ ಅಧ್ಯಕ್ಷ ಮಹಾಲಿಂಗಪ್ಪ ಕೋಳಿಗುಡ್ಡ ಹೇಳಿದರು.

ಪಟ್ಟಣದ ದಲಾಲ ವರ್ತಕರ ಸಂಘದ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈಗಿರುವ ಕೃಷಿ ಕಾಯ್ದೆ ಅನುಸಾರ ರಾಜ್ಯ ಕೃಷಿ ಮಾರುಕಟ್ಟೆ ಸಮಿತಿಯ ಪ್ರಸ್ತುತ ಪ್ರತಿಶತ 80 ರಷ್ಟು ಆರ್ಥಿಕತೆ ಕುಗ್ಗಿದೆ. ಹೀಗೆಯೇ ಕ್ರಮೇಣ ಬೆಲ್ಲದ ವ್ಯಾಪಾರಾದಿಯಾಗಿ ಎಲ್ಲ ಕೃಷಿ ಉತ್ಪನ್ನಗಳ ವ್ಯಾಪಾರ ವಹಿವಾಟು ಮುಂದುವರಿದಿದ್ದೇ ಆದರೆ ರಾಜ್ಯದ ಎಲ್ಲ ಮಾರುಕಟ್ಟೆಗಳು ದಿವಾಳಿ ಹಂತಕ್ಕೆ ತಲುಪಿ, ರೈತರು, ವ್ಯಾಪಾರಸ್ಥರು, ಕೂಲಿ ಕಾರ್ಮಿಕರು ಮತ್ತು ಕಾರಕೂನರು ಬೀದಿಪಾಲಾಗುತ್ತಾರೆ. ಆದ್ದರಿಂದ ಈ ಕಾನೂನುಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆದು ಜನತೆಗೆ ನೆರವಾಗಬೇಕು ಎಂದರು.

ದಲಾಲ ವರ್ತಕರ ಸಂಘದ ಕಾರ್ಯದರ್ಶಿ ಶ್ರೀಶೈಲ ನುಚ್ಚಿ ಮಾತನಾಡಿ, ಅಂದು ಕಿರಾಣಿ ವ್ಯಾಪಾರಸ್ಥರ ಸಂಘ, ಸ್ಟೇಷನರಿ ವ್ಯಾಪಾರಸ್ಥರ ಸಂಘ, ರೈತ ಸಂಘ ಸೇರಿ ವಿವಿಧ ಸಂಘಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಪುರಸಭೆ ಕಚೇರಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಗುವುದೆಂದು ತಿಳಿಸಿದರು.

ದಲಾಲ ವರ್ತಕರ ಸಂಘದ ಉಪಾಧ್ಯಕ್ಷ ಬಾಳಕೃಷ್ಣ ಮಾಳವದೆ, ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ಅಶೋಕ ಅಂಗಡಿ, ಚಂದ್ರಶೇಖರ ಗೊಂದಿ, ಜಿ. ಜಿ. ಹುಬ್ಬಳ್ಳಿ, ಬಸವರಾಜ ಬಟಕುರ್ಕಿ, ಅಶೋಕ ಓಸ್ವಾಲ, ಚಂದ್ರು ಸಂಶಿ, ನಿಜಗುಣಿ ಷಣ್ಮುಖ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net