

ದಾವಣಗೆರೆ: ರಾಜ್ಯ ಸರ್ಕಾರ ನ.16 ರಂದು ಕರೆದಿರುವ ರೈತ ಮುಖಂಡರ ಸಭೆಯಲ್ಲಿ ಮಾರಕವಾದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಚಳವಳಿ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಹೇಳಿದರು.
ಚುನಾವಣೆಗೂ ಮೊದಲು ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಹಾಗೂ ಜಾನುವಾರು ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್, ಅಧಿಕಾರಕ್ಕೆ ಬಂದ ನಂತರ ಬೇಜವಾಬ್ದಾರಿ ತೋರುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರೈತ ವಿರೋಧಿ ಕಾನೂನುಗಳ ವಿರುದ್ಧ ಹಾಗೂ ರೈತರ ಉತ್ಪನ್ನಗಳಿಗೆ ಕಾನೂನು ಚೌಕಟ್ಟಿನಲ್ಲಿ ಬೆಂಬಲ ಬೆಲೆ ನಿಗದಿಪಡಿಸಲು ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನ.26, 27 ಹಾಗೂ 28ರಂದು ಮೂರುದಿನ 72 ಗಂಟೆಗಳ ಕಾಲ ಧರಣಿ ಹಮ್ಮಿಕೊಳ್ಳಲಾಗಿದೆ. ಸುಮಾರು 50 ಸಾವಿರ ಜನರು ಭಾಗವಹಿಸಲಿದ್ದಾರೆ ಎಂದರು.
ರಾಜ್ಯದ 216 ತಾಲೂಕುಗಳಲ್ಲಿ ಭೀಕರ ಬರಗಾಲ ತಲೆದೋರಿದ್ದು, ಕೃಷಿ ಕಾರ್ಮಿಕರು ವಲಸೆ ಹೋಗುತ್ತಿದ್ದರೂ ಬರ ನಿರ್ವಹಣೆ ಮಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ. ರಾಜ್ಯ ಸರ್ಕಾರ ಜನರ ಆಶೋತ್ತರಗಳಿಗೆ ತಕ್ಕಂತೆ ನಡೆಯುತ್ತಿಲ್ಲ. ಇದೇ ರೀತಿ ಆಡಳಿತ ಮುಂದುವರಿಸಿದರೆ ತಿರಸ್ಕರಿಸುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸರ್ಕಾರ ರಾಜ್ಯದ 4.42 ಕೋಟಿ ಫಲಾನುಭವಿಗಳಿಗೆ 5 ಕೆ.ಜಿ. ಅಕ್ಕಿಗೆ 9020 ಕೋಟಿ ರೂ. ನೀಡುತ್ತಿದೆ. ಇದರ ಬದಲು 5 ಕೆ.ಜಿ. ರಾಗಿ ಅಥವಾ ಜೋಳ, 1 ಕೆ.ಜಿ. ತೊಗರಿಬೇಳೆ ಹಾಗೂ 1 ಕೆ.ಜಿ. ಶೇಂಗಾ ಎಣ್ಣೆ ನೀಡಬೇಕು. ಇದಕ್ಕಾಗಿ ಕೇವಲ 6800 ಕೋಟಿ ರೂ. ವ್ಯಯವಾಗಲಿದ್ದು, ಅಪೌಷ್ಟಿಕತೆಯೂ ನಿವಾರಣೆಯಾಗಲಿದೆ ಹಾಗೂ ರೈತರಿಗೂ ಉತ್ತೇಜನ ನೀಡಿದಂತಾಗಲಿದೆ ಎಂದು ಸಲಹೆ ನೀಡಿದರು.
ರೈತಸಂಘದ ಪದಾಧಿಕಾರಿಗಳಾದ ರವಿಕಿರಣ್ ಪೂಣಂಚ, ಮಂಜುಳಾ ಅಕ್ಕಿ, ನಾಗೇಂದ್ರಪ್ಪ, ಬುಳ್ಳಾಪುರದ ಹನುಮಂತಪ್ಪ, ಅರುಣ್‌ಕುಮಾರ್ ಕುರುಡಿ, ಕೊಗ್ಗನೂರು ಹನುಮಂತಪ್ಪ, ರೇವಣಸಿದ್ದಪ್ಪ ಸುದ್ದಿಗೋಷ್ಠಿಯಲ್ಲಿದ್ದರು.
--