ಕೃಷಿ ಕಾಯ್ದೆ ರದ್ದತಿಗೆ ಆಗ್ರಹ: ರೈತ ಪರ ಸಂಘಟನೆಗಳಿಂದ ಪ್ರತ್ಯೇಕ ಪ್ರತಿಭಟನೆ

DSC_3149
Published on

ಮೈಸೂರು: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ರದ್ದತಿಗೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ದೇಶಾದ್ಯಂತ ಕರೆ ನೀಡಿರುವ ಚಕ್ಕಾ ಜಾಮ್ ಬೆಂಬಲಿಸಿ ಶನಿವಾರ ನಗರದಲ್ಲಿ ರೈತ ಪರ ಸಂಘಟನೆಗಳು ಪ್ರತ್ಯೇಕವಾಗಿ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದವು.

ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೊಲಂಬಿಯಾ ಏಷಿಯಾ ಆಸ್ಪತ್ರೆ ಸರ್ಕಲ್ ಬಳಿ ಜಮಾವಣೆಗೊಂಡ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಸಂವಿಧಾನ ರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿ ಸೇರಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಮತ್ತು ಮುಖಂಡರು ಒಂದು ಗಂಟೆಗೂ ಹೆಚ್ಚು ಕಾಲ ಮೈಸೂರು-ಬೆಂಗಳೂರು ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ದೆಹಲಿ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ಪ್ರದೇಶದ ಸುತ್ತ ತಂತಿಬೇಲಿ ಹಾಕಿಸಿ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಕಡಿತ, ಇಂಟರ್‌ನೆಟ್ ಸೇವೆಯನ್ನೂ ಸ್ಥಗಿತಗೊಳಿಸಲಾಗಿದೆ. ಇದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಹತಾಶೆಯ ಪರಮಾವಧಿ ಪ್ರತೀಕ ಎಂದು ಟೀಕಿಸಿದರು.

ರೈತರ ಹೋರಾಟವನ್ನು ಕುಗ್ಗಿಸಲು ಕೇಂದ್ರ ಸರ್ಕಾರ ವಾಮಮಾರ್ಗ ಅನುಸರಿಸುತ್ತಿದೆ. ಇದರ ಫಲವನ್ನು ಅದು ಅನುಭವಿಸಲಿದೆ ಎಂದು ಕಿಡಿಕಾರಿದರು.

ಕೃಷಿಗೆ ಕಾರ್ಪೋರೇಟ್ ವಲಯ ಕೂಡ ದೊಡ್ಡ ವೈರಿ. ಇದರ ವಿರುದ್ಧ ಕೃಷಿಕರೀಗ ತಿರುಗಿಬಿದ್ದಿದ್ದಾರೆ. ಇದರಿಂದ ಕಂಗೆಟ್ಟಿರುವ ಕೇಂದ್ರ ಸರ್ಕಾರ ಹೋರಾಟವನ್ನು ದಮನ ಮಾಡಲು ಕುತಂತ್ರ ನಡೆಸಿದೆ ಎಂದೂ ದೂರಿದರು.

ಕೇಂದ್ರ ಸರ್ಕಾರದಿಂದ 3ನೇ ದರ್ಜೆಯ ರಾಜಕಾರಣ ನಡೆಯುತ್ತಿದೆ. ರೈತರನ್ನು ಹಾಗೂ ಮಾಧ್ಯಮದವರನ್ನು ಎದುರಿಸಲಾಗದ ವ್ಯಕ್ತಿ ದೇಶವನ್ನು ಆಳುತ್ತಿದ್ದಾರೆ. 11 ಸುತ್ತಿನ ಮಾತುಕತೆ ನಡೆಸಿದರೂ ಸರ್ಕಾರ ಮೊಂಡುತನ ಪ್ರದರ್ಶಿಸುತ್ತಿದೆ. ಕೇವಲ ಉಪ ಚುನಾವಣೆಗಳಲ್ಲಿ ಗೆಲ್ಲುವುದೇ ದೊಡ್ಡ ಸಾಧನೆಯಾಗಿದೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತರಿಗೆ ಮಾರಕವಾಗಿರುವ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ಪೊಲೀಸರೊಂದಿಗೆ ವಾಗ್ವಾದ: ಪ್ರತಿಭಟನೆ ಹಿನ್ನೆಲೆಯಲ್ಲಿ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಸಿಗ್ನಲ್ ಬಳಿ ಭದ್ರತೆಗಾಗಿ ನೂರಾರು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿತ್ತು. ಡಿಸಿಪಿ ಪ್ರಕಾಶ್‌ಗೌಡ, ಗೀತಾಪ್ರಸನ್ನ ನೇತೃತ್ವದಲ್ಲಿ 200 ಕ್ಕೂ ಹೆಚ್ಚಿನ ಪೊಲೀಸರು ಇದ್ದರು.

ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾ ನಿರತರ ನಡುವೆ ಮಾತಿನ ವಾಗ್ವಾದ ನಡೆಯಿತು. ಮಧ್ಯಾಹ್ನ 1 ಗಂಟೆಯಾಗುತ್ತಿದ್ದಂತೆ ಪ್ರತಿಭಟನೆಯನ್ನು ಕೈಬಿಡುವಂತೆ ಪೊಲೀಸರು ಮನವಿ ಮಾಡಿದರು. ಆದರೆ, ತಾವು ಮಧ್ಯಾಹ್ನ 3 ಗಂಟೆವರೆಗೆ ಪ್ರತಿಭಟನೆ ನಡೆಸುತ್ತೇವೆ ಎಂದು ರೈತರು ಹಠ ಹಿಡಿದ ಕಾರಣ ಕೆಲ ಕಾಲ ವಾಗ್ವಾದ ನಡೆಯಿತು. ಬಳಿಕ ಪೊಲೀಸರು ರೈತರನ್ನು ಬಂಧಿಸಿ ಮೂರು ಬಸ್‌ಗಳಲ್ಲಿ ಕರೆದೊಯ್ದು ಡಿಆರ್ ಗ್ರೌಂಡ್ ಬಳಿ ಬಿಡುಗಡೆ ಮಾಡಿದರು.

ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಮುಖಂಡರಾದ ಹೊಸಕೋಟೆ ಬಸವರಾಜು, ಮರಂಕಯ್ಯ, ಪುನೀತ್, ಉಮಾದೇವಿ, ಎಂ.ಲಕ್ಷ್ಮಣ್, ಚಂದ್ರಶೇಖರ್ ಮೇಟಿ, ಶಬ್ಬೀರ್ ಮುಸ್ತಾಫ, ಸಂಧ್ಯಾ ಇತರರಿದ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಸತತ ಎರಡು ಗಂಟೆಗೂ ಹೆಚ್ಚುಕಾಲ ಸ್ಥಗಿತಗೊಂಡಿದ್ದ ವಾಹನ ಸಂಚಾರ ಮತ್ತೆ ಆರಂಭಗೊಂಡಿತು.

ದನಕರು, ಕುರಿಗಳೊಂದಿಗೆ ಪ್ರತಿಭಟನೆ:

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ಐಕ್ಯ ಹೋರಾಟ ಸಮಿತಿ ಸದಸ್ಯರು ರಿಂಗ್ ರಸ್ತೆಯ ಬಂಡೀಪಾಳ್ಯ ವೃತ್ತದಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ದನಕರು, ಕುರಿಗಳೊಂದಿಗೆ ಎತ್ತಿನ ಗಾಡಿ ಮೂಲಕ ಹಳ್ಳಿಗಳಿಂದ ಬಂದಿದ್ದ ಅನ್ನದಾತರು ಮೈಸೂರು-ನಂಜನಗೂಡು ರಸ್ತೆಯಲ್ಲೇ ಠಿಕಾಣಿ ಹೂಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಎಲ್ಲ ರೈತ ವಿರೋಧಿ, ಜನವಿರೋಧಿ ಕಾಯ್ದೆಗಳು ಕೂಡಲೇ ಕೈಬಿಡಬೇಕು. ರೈತರ ಎಲ್ಲ ಬೆಳೆಗಳಿಗೂ ವೈಜ್ಞಾನಿಕ, ಲಾಭದಾಯಕ ಬೆಲೆ ನಿಗದಿಗೊಳಿಸಬೇಕು ಎಂದು ಒತ್ತಾಯಿಸಿದರು.

ಅಡುಗೆ ಮಾಡಲು ಮುಂದಾದರು:

ರಾಜ್ಯ ಕಬ್ಬು ಬೆಳೆಗಾರರ ಸಂಘಟನೆ ಸದಸ್ಯರು ರಸ್ತೆಯಲ್ಲಿ ಅಡುಗೆ ಮಾಡಲು ಮುಂದಾದಾಗ ಪೊಲೀಸರು ಅನುಮತಿ ನಿರಾಕರಿಸಿದರು. ಆದರೂ, ರೈತರು ಗ್ಯಾಸ್ ಸಿಲಿಂಡರ್ ಓಪನ್ ಮಾಡಲು ಮುಂದಾದರು. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಬಿಸಿಲು ಜಾಸ್ತಿ ಇದೆ. ರಸ್ತೆಯಲ್ಲಿ ಅಡುಗೆ ಮಾಡಬೇಡಿ ಎಂದು ಮನವಿ ಮಾಡಿದರೂ ರೈತರು ಪಟ್ಟು ಬಿಡಲಿಲ್ಲ. ಈ ವೇಳೆ ಪೊಲೀಸರ ಜತೆ ಮಾತಿನ ಚಕಮಕಿ ನಡೆಸಿದರು. ನಮಗೆ ನೀವೇ ಊಟ ತರಿಸಿಕೊಡಿ ಎಂದು ಪೊಲೀಸರನ್ನೇ ಕೇಳಿಕೊಂಡರು. ಬಳಿಕ ತರಕಾರಿ ಕತ್ತರಿಸಲು ಮುಂದಾದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಡಿಆರ್ ಗ್ರೌಂಡ್‌ನಲ್ಲಿ ಬಿಡುಗಡೆ ಮಾಡಿದರು.

ಕುಸಿದು ಬಿದ್ದ ರೈತ: ಪೊಲೀಸರು ಬಂಧಿಸುವ ವೇಳೆ ನಂಜನಗೂಡಿನ ಅಳಗಂಚಿ ಗ್ರಾಮದ ರೈತ ನಂಜುಂಡಸ್ವಾಮಿ ಕುತ್ತಿಗೆಗೆ ಶಾಲು ಬಿಗಿದುಕೊಂಡು ಆಕ್ರೋಶ ಹೊರಹಾಕಿದರು. ಶಾಲು ಬಿಗಿಯಾದ ಕಾರಣ ಅವರು ಸ್ಥಳದಲ್ಲೇ ಕುಸಿದು ಬಿದ್ದರು. ಈ ವೇಳೆ ಪೊಲೀಸರು ತಮ್ಮ ವಾಹನದಲ್ಲೇ ರೈತನನ್ನು ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಸತತ ಎರಡು ಗಂಟೆಗೂ ಹೆಚ್ಚುಕಾಲ ಸ್ಥಗಿತಗೊಂಡಿದ ವಾಹನ ಸಂಚಾರ ಮೈಸೂರು- ನಂಜನಗೂಡು ರಸ್ತೆಯಲ್ಲಿ ಮ.2 ರಿಂದ ಮತ್ತೆ ಆರಂಭಗೊಂಡಿತು.

ರೈತ ಮುಖಂಡರಾದ ಅತ್ತಹಳ್ಳಿ ದೇವರಾಜು, ಕಿರಗಸೂರು ಶಂಕರ್, ಬಡಗನಪುರ ನಾಗರಾಜು, ಸೋಮಶೇಖರ್, ಗಳಗನಹುಂಡಿ ವೆಂಕಟೇಶ್, ಸಾತಕಳ್ಳಿ ಬಸವರಾಜು, ಕೃಷ್ಣಪ್ಪ, ವಿದ್ಯಾ ಸಾಗರ್, ಮಂಜು ಕಿರಣ್, ರಘು ಇತರರಿದ್ದರು.

ಸರ್ವಾಧಿಕಾರಿ ಧೋರಣೆಗೆ ಖಂಡನೆ :

ರೈತ ಕೃಷಿ-ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ರೈತರು ತಾಲೂಕಿನ ಜಯಪುರದ ಮಾನಂದವಾಡಿ ರಸ್ತೆಯಲ್ಲಿ ಕೆಲಕಾಲ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ದೆಹಲಿಯಲ್ಲಿ ಎರಡು ತಿಂಗಳಿಂದಲೂ ಶಾಂತಿಯುತ ಹೋರಾಟ ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಪರಿಗಣಿಸದೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು. ಮುಖಂಡರಾದ ಶ್ರೀಕಂಠ, ಬಸವರಾಜು, ರಮೇಶ್, ಕೆಂಪರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net