ಕೃಷಿ ಉದ್ದಿಮೆದಾರರನ್ನು ಗುರುತಿಸಿ ಪ್ರೋತ್ಸಾಹಿಸಿ

ಕೆ.ಆರ್.ಪೇಟೆ ಪಟ್ಟಣದ ಹೊರವಲಯದ ಚಿಕ್ಕೋನಹಳ್ಳಿಯ ರೇಷ್ಮೆ ಇಲಾಖೆಯ ತರಬೇತಿ ಕೆಂದ್ರದ ಆವರಣದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕ ಎಚ್.ಟಿ.ಮಂಜು ಮಾತನಾಡಿದರು. ನಿಸರ್ಗಪ್ರಿಯಾ, ಬಿ.ಎಸ್.ಸತೀಶ್ ಮತ್ತಿತರರಿದ್ದರು.
22 krp 01
Published on

ಕೆ.ಆರ್.ಪೇಟೆ: ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಿ ಕೃಷಿ ಉದ್ದಿಮೆದಾರರನ್ನು ಗುರುತಿಸಿ ಪ್ರೋತ್ಸಾಹಿಸಿದರೆ ರೈತರ ಮಕ್ಕಳು ಒಂದಲ್ಲಾ ಒಂದು ವೃತ್ತಿ ಅವಲಂಬಿಸಿ ಬದುಕು ಕಟ್ಟಿಕೊಳ್ಳುತ್ತಾರೆ ಎಂದು ಶಾಸಕ ಎಚ್.ಟಿ.ಮಂಜು ಸಲಹೆ ನೀಡಿದರು.


ಪಟ್ಟಣದ ಹೊರ ವಲಯದ ಚಿಕ್ಕೋನಹಳ್ಳಿಯ ರೇಷ್ಮೆ ಇಲಾಖೆಯ ತರಬೇತಿ ಕೇಂದ್ರದ ಆವರಣದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಉದ್ಯೋಗ ಹುಡುಕಿ ಮಹಾನಗರಗಳಿಗೆ ವಲಸೆ ಹೋಗುತ್ತಿರುವವರೆಲ್ಲ ಸಣ್ಣ ಮತ್ತು ಅತಿಸಣ್ಣ ರೈತ ಕುಟುಂಬದ ಮಕ್ಕಳು. ರಾಜ್ಯ ಸರ್ಕಾರ ಕೃಷಿಗೆ ಪರಸ್ಪರ ಸಂಬಂಧವಿರುವ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆಗಳ ಮೂಲಕ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದೆ. ಆದರೆ ಇದನ್ನು ಕಾರ್ಯಗತಗೊಳಿಸುವಲ್ಲಿ ಅಧಿಕಾರಿಗಳು ವಿಫಲರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.


ಅರ್ಜಿ ಆಹ್ವಾನಿಸಿ ಫಲಾನುಭವಿಗೆ ಸವಲತ್ತು ವಿತರಣೆಗೆ ಮಾತ್ರ ಅಧಿಕಾರಿಗಳು ಕ್ರಮವಹಿಸುತ್ತಿದ್ದು, ತಮ್ಮಲ್ಲಿನ ಯೋಜನೆಗಳನ್ನು ಉತ್ತೇಜಿಸುವ ಕೆಲಸ ಮಾಡುತ್ತಿಲ್ಲ. ತಾಲೂಕಿನಾದ್ಯಂತ ಬಹುತೇಕ ರೈತ ಕುಟುಂಬಗಳು ಹೈನುಗಾರಿಕೆಯಲ್ಲಿ ನಿರತವಾಗಿವೆ. ಹೈನುಗಾರಿಕೆಯನ್ನು ಉದ್ದಿಮೆಯನ್ನಾಗಿಸುವ ಕೆಲಸ ಆಗುತ್ತಿಲ್ಲ. ಹಸು ಕೊಳ್ಳಲು ಸಹಾಯಧನ ನೀಡಿ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಆಸಕ್ತ ರೈತರನ್ನು ಉತ್ತೇಜಿಸಿ ಅವರಿಗೆ ಹತ್ತಾರು ಹಸುಗಳನ್ನು ಕಟ್ಟಿಕೊಂಡು ಹೈನುಗಾರಿಕೆ ಮಾಡಲು ಉತ್ತೇಜಿಸಬೇಕು. ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿ ಹಸು ಸಾಕಣೆ, ಕುರಿ, ಮೇಕೆ ಮತ್ತು ಹಂದಿ ಸಾಕಣೆ ಮಾಡುವವರಿಗೆ ಅಗತ್ಯ ಸಾಲ ಸೌಲಭ್ಯ ಕಲ್ಪಿಸಿ ಆರ್ಥಿಕ ನೆರವು ದೊರಕಿಸಿಕೊಡಬೇಕು ಎಂದರು.


ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆ, ರೇಷ್ಮೆ, ಆರೋಗ್ಯ, ಆಯುಷ್, ಸಾರ್ವಜನಿಕ ಶಿಕ್ಷಣ, ಅಕ್ಷರ ದಾಸೋಹ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಅರಣ್ಯ, ಸಮಾಜ ಕಲ್ಯಾಣ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಉಪ ನೋಂದಣಿ, ಸಹಕಾರ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದು ತಮ್ಮ ತಮ್ಮ ಇಲಾಖಾ ವ್ಯಾಪ್ತಿಯ ಪ್ರಗತಿ ಮಂಡಿಸಿದರು.

ತಹಸೀಲ್ದಾರ್ ನಿಸರ್ಗಪ್ರಿಯಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಸತೀಶ್ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net