

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
ಜಿಲ್ಲೆಯಲ್ಲಿ ಕಳೆದ ಬಾರಿಗಿಂತ ಹೆಚ್ಚುವರಿಯಾಗಿ ಐದು ಸಾವಿರ ಹೆಕ್ಟೇರ್ ಪ್ರದೇಶ ವಿಸ್ತೀರ್ಣದೊಂದಿಗೆ ಕೃಷಿ ಇಲಾಖೆ, ಈ ಬಾರಿಯ ಮುಂಗಾರು ಹಂಗಾಮಿನಲ್ಲಿ 3.26 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಯ ನಿರೀಕ್ಷೆ ಹೊಂದಿದೆ.
ಮಾರ್ಚ್ 1ರಿಂದ ಮೇ 19ರವರೆಗೆ ಪೂರ್ವ ಮುಂಗಾರು ಮಳೆ ವಾಡಿಕೆಗಿಂತಲೂ (70.7ಮಿ. ಮೀ.) ಅಧಿಕ (133.3 ಮಿ.ಮೀ.)ವಾಗಿದ್ದು, ಜಿಲ್ಲಾದ್ಯಂತ ಕೃಷಿ ಚಟುವಟಿಕೆಗಳಿಗೆ ಚಾಲನೆ ಸಿಕ್ಕಿದೆ. ರೈತರು ಭೂಮಿ ಹಸನು ಮಾಡುತ್ತಿದ್ದು, ಬಿತ್ತನೆ ಕೂಡ ಆರಂಭವಾಗಿದೆ.
ಜಿಲ್ಲೆಯ 7,70,702 ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣದಲ್ಲಿ, 3,87,810 ಹೆಕ್ಟೇರ್ ಕೃಷಿ ಬೆಳೆ ಪ್ರದೇಶವಿದೆ. ಶೇಂಗಾ, ಮುಸುಕಿನ ಜೋಳ, ರಾಗಿ, ತೊಗರಿ, ಸಿರಿಧಾನ್ಯ, ಹತ್ತಿ, ಸೂರ‌್ಯಕಾಂತಿ, ಸೋಯಾಬಿನ್ ಇತ್ಯಾದಿ ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳು.
ಉಳಿದಂತೆ ಕಡಲೆ, ಮುಸುಕಿನ ಜೋಳ, ಶೇಂಗಾ, ರಾಗಿ, ಜೋಳ ಹಿಂಗಾರು ಹಂಗಾಮಿನ ಹಾಗೂ ಮುಸುಕಿನ ಜೋಳ, ಶೇಂಗಾ,ರಾಗಿ, ಜೋಳ ಬೇಸಿಗೆ ಹಂಗಾಮಿನ ಬೆಳೆಗಳಾಗಿವೆ. ಅಡಕೆ, ಈರುಳ್ಳಿ, ತೆಂಗು, ಬಾಳೆ, ದಾಳಿಂಬೆ, ಟೊಮ್ಯಾಟೋ, ಹೂವಿನ ಬೆಳೆಗಳು ಜಿಲ್ಲೆಯ ಪ್ರಮುಖ ತೋಟಗಾರಿಕೆ ಬೆಳೆಗಳಾಗಿವೆ.
ಭತ್ತ, ಜೋಳ, ರಾಗಿ, ಮೆಕ್ಕೆಜೋಳ, ಸಜ್ಜೆ, ಸಿರಿಧಾನ್ಯ, ತೊಗರಿ, ಹುರುಳಿ, ಉದ್ದು, ಹೆಸರು, ಅಲಸಂದೆ-ಇತರೆ, ಅವರೆ, ಸೋಯಾಬೀ ನ್, ಶೇಂಗಾ, ಸೂರ‌್ಯಕಾಂತಿ, ಎಳ್ಳು, ಹರಳು, ಹುಚ್ಚೆಳ್ಳು, ಸಾಸಿವೆ, ಹತ್ತಿ, ಕಬ್ಬು ಬೆಳೆಗಳ ಸಹಿತ ಪ್ರಸಕ್ತ ಸಾಲಿನಲ್ಲಿ ನಿಗದಿಪಡಿಸಿರುವ 326738 ಹೆಕ್ಟೇರ್ ಕೃಷಿ ಬೆಳೆ ಗುರಿ ಪೈಕಿ ಈವರೆಗೆ ಶೇ.35ರಷ್ಟು ಬಿತ್ತನೆಯಾಗಿದೆ. ಕಳೆದ ಬಾರಿ 3.21 ಲಕ್ಷ ಹೆಕ್ಟೇರ್ ಗುರಿ ಪೈಕಿ 3.19 ಲಕ್ಷ ಹೆಕ್ಟೇರ್ ಬಿತ್ತನೆಯಾಗಿತ್ತು.
ಜಿಲ್ಲೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಗೊಬ್ಬರ ಮತ್ತು ಬಿತ್ತನೆ ಬೀಜಗಳು ಪೂರೈಕೆಯಾಗಲಿವೆ. ಮುಂಗಾರು ಹಂಗಾಮಿಗೆ 1,80,913 ಕ್ವಿಂಟಾಲ್‌ನಷ್ಟು ವಿವಿಧ ಬಿತ್ತನೆ ಬೀಜಗಳ ಅಗತ್ಯವಿದೆ. ಇಲಾಖೆಯಿಂದ 31,454 ಕ್ವಿಂ. ಹಾಗೂ ಮಾರುಕಟ್ಟೆಯಿಂದ 1,49,460 ಕ್ವಿಂ. ನಿರೀಕ್ಷಿಸಲಾಗಿದೆ.
ಬೀಳು ಭೂಮಿ ವಿಸ್ತೀರ್ಣ ಕಡಿತಗೊಳಿಸಿ, ಕಡಿಮೆ ವೆಚ್ಚದ ಔಡಲ, ಕಡಿಮೆ ಅವಧಿಯಲ್ಲಿ ಉತ್ತಮ ಇಳುವರಿಯ ತೊಗರಿ ಇತ್ಯಾದಿ ಬೆಳೆಗಳ ಕ್ಷೇತ್ರ ವಿಸ್ತರಣೆಗೆ ಕೃಷಿ ಇಲಾಖೆ ಯೋಜಿಸಿದೆ. ಶೇಂಗಾ, ತೊಗರಿ, ಸೂರ‌್ಯಕಾಂತಿ, ಮೆಕ್ಕೆಜೋಳ, ರಾಗಿ, ನವಣೆ ಮೊದಲಾದ ಪ್ರಮುಖ ಬಿತ್ತನೆ ಬೀಜಗಳನ್ನು ನಿಯಮಾನುಸಾರ ರಿಯಾಯಿತಿ ದರದಲ್ಲಿ ವಿತರಿಸಲು ಸಿದ್ಧತೆ ನಡೆಸಿದೆ.
ಜಿಲ್ಲೆಯಲ್ಲಿ ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಬೆಳೆ ಸಹಿತ, ಕಳೆದ ಏಪ್ರಿಲ್‌ನಿಂದ 2026 ಮಾರ್ಚ್‌ವರೆಗೆ ಯೂರಿಯಾ, ಡಿಎ ಪಿ, ಎಂಒಪಿ, ಕಾಂಪ್ಲೆಕ್ಸ್ ಹಾಗೂ ಎಸ್‌ಎಸ್‌ವಿ 94546 ಮೆಟ್ರಿಕ್ ಟನ್ ರಸಗೊಬ್ಬರಗಳ ಬೇಡಿಕೆ ಇದೆ.
ಕೃಷಿಕರು ಡಿಎಪಿಗೆ ಪರ್ಯಾಯವಾಗಿ ಸಂಯುಕ್ತ (ಕಾಂಪ್ಲೆಕ್ಸ್ ) ರಸಗೊಬ್ಬರ ಬಳಸುವಂತೆ ಇಲಾಖೆ ಮನವಿ ಮಾಡಿದೆ. ಒಂದೆರಡು ಪೋಷಕಾಂಶಗಳನ್ನು ಒದಗಿಸುವ ಯೂರಿಯಾ, ಡಿಎಪಿ ಬದಲಿಗೆ 20:20:01:13/ 15:15:15 ಇತ್ಯಾದಿ ನಾನಾ ಕಾಂಪ್ಲೆಕ್ಸ್‌ಗಳನ್ನು ಬಳಸಬೇಕೆಂಬುದು ಇಲಾಖೆ ಸಲಹೆಯಾಗಿದೆ.
---
ತಾಲೂಕು-ಬಿತ್ತನೆ ಗುರಿ-ಸಾಧನೆ(ಹೆಕ್ಟೇರ್)
ಚಳ್ಳಕೆರೆ-92443-0
ಚಿತ್ರದುರ್ಗ-58575-0
ಹಿರಿಯೂರು-43995-84
ಹೊಳಲ್ಕೆರೆ-53520-0
ಹೊಸದುರ್ಗ-50030-875
ಮೊಳಕಾಲ್ಮೂರು-28185-190
----
ರಸಗೊಬ್ಬರಗಳ ಬೇಡಿಕೆ
ಹೆಸರು-ಒಟ್ಟು ದಾಸ್ತಾನು(ಮೆ.ಟನ್)-ಮಾರಾಟ-ಉಳಿಕೆ ದಾಸ್ತಾನು(ಮೇ 14ರ ಅಂತ್ಯಕ್ಕೆ)ಬಪರ್ ಸ್ಟಾಕ್(ಮೇ 16)
ಯೂರಿಯಾ-38231-13079-5172-7907-19
ಡಿಎಪಿ-15008-4684-2481-2202-695
ಎಂಒಪಿ-2533-942-183-759-00
ಕಾಂಪ್ಲೆಕ್ಸ್-37095-11445-3792-7652-64
ಎಸ್‌ಎಸ್‌ಪಿ-1679-465-143-322-00
----
ಕೋಟ್
ಗೊಬ್ಬರ ಮಾರಾಟಗಾರರು ದರ ನಮೂದಿಸಿರಬೇಕು ಹಾಗೂ ಎಂಆರ್‌ಪಿ ಮೀರದಂತೆ ಮಾರಾಟ ಮಾಡಬೇಕು. ಕಳಪೆ ಬಿತ್ತನೆ ಬೀಜ ಹಾಗೂ ನಿಗದಿಗಿಂತಲೂ ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟ ಮಾಡಿದರೆ ಕ್ರಮ ಜರುಗಿಸಲಾಗುವುದು.
ಡಾ.ಬಿ.ಮಂಜುನಾಥ್, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಚಿತ್ರದುರ್ಗ
---