ಕೃಷಿ ಅನುವುಗಾರರ ಪ್ರತಿಭಟನೆ

0409Klb02
Published on

ಕಲಬುರಗಿ: ಕೃಷಿ ಚಟುವಟಿಕೆಗಾಗಿ ರೈತರಿಗೆ ಸೂಕ್ತ ಮಾಹಿತಿ, ಬೆಳೆ ಸಮೀಕ್ಷೆ ಮೊದಲಾದ ಕೆಲಸಗಳನ್ನು ರೈತರ ಜತೆ ಬೇರು ಮಟ್ಟದಲ್ಲಿ ಮಾಡುತ್ತಿರುವ ಅನುವುಗಾರರ ಸೇವೆ ಮುಂದುವರಿಸುವುದರ ಜತೆಗೆ ಮಾಸಿಕ 10 ಸಾವಿರ ರೂ. ವೇತನ ನಿಗದಿಪಡಿಸುವಂತೆ ಆಗ್ರಹಿಸಿ ನಗರದಲ್ಲಿ ಶುಕ್ರವಾರ ರೈತ ಅನುವುಗಾರರು ಶ್ರಮಜೀವಿಗಳ ವೇದಿಕೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಜಿಲ್ಲೆಯ ವಿವಿಧ ಕಡೆಗಳಿಂದ ಆಗಮಿಸಿದ್ದ ನೂರಾರು ಅನುವುಗಾರರು (ತಾಂತ್ರಿಕ ಉತ್ತೇಜಕರು) ಜಿಲ್ಲಾಧಿಕಾರಿ ಕಚೇರಿ ಎದುರು ಪ್ರದರ್ಶನ ನಡೆಸಿ ತಮ್ಮ ಸೇವೆ ಮುಂದುವರೆಸುವಂತೆ ಒತ್ತಾಯಿಸಿದರು. ಕೃಷಿ ಸಚಿವ ಬಿ.ಸಿ.ಪಾಟೀಲ್ ಇಲ್ಲದ ಆದೇಶ ನೀಡಿ ನಮ್ಮ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಹೀಗಾಗಿ ಕೂಡಲೇ ಸಿಎಂ ಸೂಕ್ತ ನಿರ್ದೇಶನ ನೀಡಬೇಕು. ಇಲ್ಲವಾದರೆ ಮುಖ್ಯಮಂತ್ರಿ ಮನೆ ಇಲ್ಲವೇ ಕಚೇರಿ ಎದುರು ವಿಷಸೇವನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹಲವಾರು ವರ್ಷಗಳಿಂದ ಅನುವುಗಾರರು ಕೆಲಸ ಮಾಡುತ್ತಿದ್ದಾರೆ. ಇದೀಗ ಅವರ ಹಿತರಕ್ಷಣೆ ಮಾಡದೆ ಕೃಷಿ ಸಚಿವರು ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಹೀಗಾಗಿ ಅವರನ್ನು ಕೃಷಿ ಖಾತೆಯಿಂದ ಬದಲಾಯಿಸಿ ಮತ್ತೊಬ್ಬರಿಗೆ ಹೊಣೆ ವಹಿಸಬೇಕು ಎಂದು ನೇತೃತ್ವ ವಹಿಸಿದ್ದ ವೇದಿಕೆ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಆಗ್ರಹಿಸಿದರು.
ಸಚಿವರು ಮತ್ತು ಅಧಿಕಾರಿಗಳು ಸೇರಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸಿಎಂ ಯಡಿಯೂರಪ್ಪ ಮಧ್ಯಪ್ರವೇಶಿಸಿ ಬೆಳೆ ಸಮೀಕ್ಷೆ ಇತರ ಕೆಲಸಗಳಿಗೆ ಅವರನ್ನು ಬಳಸಿಕೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಕೃಷಿ ಸಚಿವ ಬಿ.ಸಿ.ಪಾಟೀಲ್ ಆ್ಯಪ್ ಮೂಲಕ ರೈತರು ಸ್ವಯಂ ಬೆಳೆ ಸಮೀಕ್ಷೆ ಮಾಡುವಂತೆ ಆದೇಶಿಸಿದ್ದು ಅವೈಜ್ಞಾನಿಕ. ಎಷ್ಟು ರೈತರ ಬಳಿ ಸ್ಮಾರ್ಟ್​ ಫೋ ನ್ ಇರುತ್ತದೆ ಎಂಬುದನ್ನು ಯೋಚಿಸದ ಈ ನಿರ್ಧಾರ ಮೂರ್ಖತನದ್ದಾಗಿದೆ. ಸಚಿವರು ಆ್ಯಪ್ ಮೂಲಕವೇ ಕೆಲಸ ಮಾಡುವುದಾದರೆ ಎಲ್ಲ ರೈತರಿಗೆ ಸ್ಮಾರ್ಟ್​ಫೋನ್​ ಕೊಡಿಸಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಜಗದೀಶ ಗಿರಕೆ, ಮಹಾಂತಪ್ಪ ನರೋಣಿ, ಸಿದ್ರಾಮಪ್ಪ ಧಂಗಾಪುರ, ಬಸವರಾಜ ಬೆಳಗುಂಪಾ, ರೇವಣಸಿದ್ದಪ್ಪ ಹಾಗರಗಿ, ರಿಯಾಜುದ್ದೀನ್ ಮಂಗಲಗಿ, ಕಲ್ಯಾಣಿ ದೇವಂತಗಿ, ಬಸವರಾಜ ಬಿರಾದಾರ, ವೀರಪಾಕ್ಷಿ ಗುಂಡಗುರ್ತಿ ಮೊದಲಾದವರು ಪಾಲ್ಗೊಂಡಿದ್ದರು.

ಪ್ರತಿಭಟನೆ ಬೆನ್ನಲ್ಲೇ ಕೃಷಿ ಇಲಾಖೆ ಬೆಂಗಳೂರಿನ ಹಿರಿಯ ಅಧಿಕಾರಿಗಳು ಬೇಡಿಕೆಗಳ ಬಗ್ಗೆ ಸಂಪರ್ಕಿಸಿ ವಿವರ ಪಡೆದುಕೊಂಡಿದ್ದಾರೆ. ವಾರದಲ್ಲಿ ಬೆಂಗಳೂರಿಗೆ ತೆರಳಿ ಸಿಎಂ ಹಾಗೂ ಕೃಷಿ ಸಚಿವರನ್ನು ಭೇಟಿ ಮಾಡಲಾಗುವುದು. ಸಂಬಂಧಪಟ್ಟ ಅಧಿಕಾರಿಗಳ ಹಾಗೂ ರಾಜಕೀಯ ನಾಯಕರ ಮೇಲೆ ಒತ್ತಡ ಹೇರಲಾಗುವುದು.
| ಚಂದ್ರಶೇಖರ ಹಿರೇಮಠ ಶ್ರಮಜೀವಿಗಳ ವೇದಿಕೆ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net