

ಹಾಸನ: ಕೃಷಿ ಪಂಪ್‌ಸೆಟ್‌ಗಳಿಗೆ ಕನಿಷ್ಠ 7 ಗಂಟೆ ಮೂರು ಫೇಸ್ ವಿದ್ಯುತ್ ನೀಡುವಂತೆ ಆಗ್ರಹಿಸಿ ನಗರದ ಸಂತೆಪೇಟೆಯಲ್ಲಿರುವ ಚೆಸ್ಕಾಂ ಕಚೇರಿ ಎದುರು ರೈತ ಸಂಘದಿಂದ ಗುರುವಾರ ಪ್ರತಿಭಟನೆ ನಡೆಯಿತು.
ಚೆಸ್ಕಾಂ ಕಚೇರಿ ಎದುರು ಜಮಾವಣೆಗೊಂಡ ನೂರಾರು ರೈತರು ಧರಣಿ ನಡೆಸಿ, ರಾಜ್ಯ ಸರ್ಕಾರ ಹಾಗು ಇಂಧನ ಇಲಾಖೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾತ್ರಿ ವೇಳೆ ಮೂರು ಫೇಸ್ ವಿದ್ಯುತ್ ನೀಡುತ್ತಿರುವುದರಿಂದ ಬೆಳೆಗೆ ನೀರು ಹಾಯಿಸಲು ಆಗುತ್ತಿಲ್ಲ. ಆದ್ದರಿಂದ ಹಗಲು ವೇಳೆಯೇ ನಿರಂತರ ಏಳು ಗಂಟೆ ಕಾಲ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ನೀಡಬೇಕು. ಸ್ಥಗಿತಗೊಂಡಿರುವ ಟ್ರಾನ್ಸ್ಫಾರ್ಮರ್‌ಗಳನ್ನು ಕೂಡಲೇ ರಿಪೇರಿ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಹಲವೆಡೆ ನೀರಾವರಿಗೆ ಜಲಾಶಯಗಳಿದ್ದರೂ, 45 ಲಕ್ಷಕ್ಕಿಂತ ಅಧಿಕ ಹೆಚ್ಚು ರೈತರು ನೀರಾವರಿಗಾಗಿ ಪಂಪ್‌ಸೆಂಟ್‌ಗಳ ಮೇಲೆ ಅವಲಂಬಿಸಿ ತೋಟಗಾರಿಕೆ ಮತ್ತು ಇತರೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಹೀಗಿದ್ದರೂ ರೈತರಿಗೆ ಸರಿಯಾದ ಪ್ರಮಾಣದಲ್ಲಿ ವಿದ್ಯುತ್ ಸೌಲಭ್ಯ ದೊರೆಯುತ್ತಿಲ್ಲ. ಸರ್ಕಾರ ಕೃಷಿ ಪಂಪ್‌ಸೆಂಟ್‌ಗಳಗೆ ಪ್ರತಿ ದಿನವೂ ಸಹ 7 ಗಂಟೆಗಳ ಕಾಲ ವಿದ್ಯುತ್ ಪೂರೈಸುವುದಾಗಿ ಹೇಳಿ ಕೇವಲ 1-2 ಗಂಟೆಗಳು ಮಾತ್ರ ವಿದ್ಯುತ್ ನೀಡುತ್ತಿದೆ. ಆದರೆ. ಕೈಗಾರಿಕೆಗಳಿಗೆ ಎಂದಿನಂತೆ ವಿದ್ಯುತ್ ಸರಬರಾಜು ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ 190ಕ್ಕೂ ಹೆಚ್ಚು ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. ಬರಗಾಲದ ಛಾಯೆ ಜೂನ್ ತಿಂಗಳಲೇ ಉದ್ಭವವಾದರೂ ಸರ್ಕಾರ ಮುಂಜಾಗ್ರತೆಯಿಂದ ವಿದ್ಯುತ್ ಕ್ಷಾಮ ನಿಗ್ರಹಿಸಲು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದರಿಂದಲೇ ಇಂದಿನ ಸಮಸ್ಯೆಗೆ ಕಾರಣವಾಗಿದೆ. ಇನ್ಮುಂದೆಯಾದರೂ ಸರ್ಕಾರ ಮಾತಿನಂತೆ ಪ್ರತಿದಿನ 7 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ನೀಡಬೇಕೆಂದು ಒತ್ತಾಯಿಸಿದರು.
ಸೌರ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಬೇಕು. ಎಲ್ಲಾ ಸಕ್ಕರೆ ಕಾರ್ಖಾನೆಗಳಲ್ಲಿ ವಿದ್ಯುತ್ ಉತ್ಪಾದನೆಗೆ ಕಡ್ಡಾಯ ಮಾಡಬೇಕು. ವಿದ್ಯುತ್ ಉಪಕೇಂದ್ರಗಳು ಅವಶ್ಯಕತೆ ಇರುವ ಕಡೆ ಪ್ರಾರಂಭಿಸಲು ತುರ್ತು ಕ್ರಮಕೈಗೊಳ್ಳಬೇಕು. ಸುಟ್ಟುಹೋಗಿರುವ ವಿದ್ಯುತ್ ಪರಿವರ್ತಕಗಳನ್ನು ನಿಗದಿತ ಸಮಯದ ಒಳಗೆ ಬದಲಾಯಿಸಬೇಕು. ಸರ್ಕಾರ ಹಿಂದೆ ತಿರ್ಮಾನಿಸಿರುವಂತೆ ಕರನಿರಾಕರಣ ಚಳುವಳಿಯಲ್ಲಿ ಉಳಿಸಿಕೊಂಡಿರುವ ಬಾಕಿಯನ್ನು ಮನ್ನಾ ಮಾಡಬೇಕು. ಚೆಸ್ಲಾಂ ಅಧಿಕಾರಿಗಳ ಕಿರುಕುಳವನ್ನು ತಪ್ಪಿಸಬೇಕು ಎಂದು ಅಗ್ರಹಿಸಿ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೆಚ್.ಕೆ.ರಘು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹಶೆಟ್ಟಿ, ಹಾಸನ ತಾಲ್ಲೂಕು ಅಧ್ಯಕ್ಷ ಯು.ಎಲ್. ಶಾಂತರಾಜೇ ಅರಸು, ಗೌರವಾಧ್ಯಕ್ಷ ಇಮ್ರಾನ್ ಅಹಮದ್, ಜಿಲ್ಲಾ ಕಾರ್ಯದರ್ಶಿ ಎಂ.ಎಲ್. ಹರೀಶ್, ಚನ್ನರಾಯಪಟ್ಟಣ ತಾಲ್ಲೂಕು ಅಧ್ಯಕ್ಷ ರಾಮಚಂದ್ರ, ಅರಸೀಕೆರೆ ತಾಲ್ಲೂಕು ಅಧ್ಯಕ್ಷ ಶಿವಮೂರ್ತಿ, ಅರಕಲಗೂಡು ತಾಲ್ಲೂಕು ಅಧ್ಯಕ್ಷ ಹೆಚ್.ಆರ್.ದಿನೇಶ್, ಹೊಳೆನರಸೀಪುರ ತಾಲ್ಲೂಕು ಅಧ್ಯಕ್ಷ ಸೋಮಶೇಖರ್, ಮಹಿಳಾ ಜಿಲ್ಲಾಧ್ಯಕ್ಷೆ ಕಾಮಾಕ್ಷಮ್ಮ ಇದ್ದರು.