ಕೃತಿಕೋತ್ಸವ-ವಿಷ್ಣುದೀಪ ಆಚರಣೆ

16mlk1
Published on

ಮೇಲುಕೋಟೆ: ಶ್ರೀಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಭಾನುವಾರ ರಾತ್ರಿ ಕೃತಿಕೋತ್ಸವ-ವಿಷ್ಣುದೀಪವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ವೇದಮಂತ್ರಗಳೊಂದಿಗೆ ಮೂಲ ಮೂರ್ತಿ ಚೆಲ್ವತಿರುನಾರಾಯಣಸ್ವಾಮಿಗೆ ಕುಂಭಾರತಿ ಮಾಡಿ ಒಳ ಪ್ರಾಕಾರದಲ್ಲಿ ಉತ್ಸವ ನೆರವೇರಿಸಿ ರಾಜಗೋಪುರದ ಮುಂಭಾಗ ಕರಗು ಸುಡಲಾಯಿತು.

ಮೂಲ ಮೂರ್ತಿಗೆ ಆರತಿ ಮಾಡಿದ ಕುಂಬಾರತಿಯನ್ನು ಪರಿಚಾರಕ ಎಂ.ಎನ್.ಪಾರ್ಥಸಾರಥಿ ತಲೆಯ ಮೇಲಿಟ್ಟು ದೇವರ ಉತ್ಸವದೊಂದಿಗೆ ಬಂದ ನಂತರ ರಾಜಗೋಪುರದ ಮುಂಭಾಗ ದೇವರಿಗೆ ಮಂಗಳಾರತಿ ನೆರವೇರಿಸಲಾಯಿತು. ನಂತರ ಬಂಡೀಕಾರ ಬಲರಾಮೇಗೌಡರಿಗೆ ಮರ್ಯಾದೆ ನೆರವೇರಿದ ನಂತರ ದೊಡ್ಡ ಬಟ್ಟೆಗೆ ಎಣ್ಣೆಯಲ್ಲಿ ಅದ್ದಿ ತಯಾರಿಸಿದ ಕರಗನ್ನು ಸುಡಲಾಯಿತು.

ಭಕ್ತರು ಕರಗು ಪ್ರಸಾದ ಸ್ವೀಕರಿಸಿದ ನಂತರ ಸ್ವಾಮಿಗೆ ಮಂಟಪವಾಹನೋತ್ಸವ ಸಂಭ್ರದಿಂದ ನೆರವೇರಿತು. ಯೋಗಾನರಸಿಂಹಸ್ವಾಮಿ ಬೆಟ್ಟದಲ್ಲೂ ವಿಷ್ಣುದೀಪ ಕಾರ್ಯಕ್ರಮಗಳು ನೆರವೇರಿದವು.

ಜನವರಿ 4ರಿಂದ ಆರಂಭವಾಗುವ ಕೊಠಾರೋತ್ಸವದವರೆಗೆ ದೇವಾಲಯದಲ್ಲಿ ಅಭಿಷೇಕ, ಉತ್ಸವಗಳು ಇರುವುದಿಲ್ಲ. ದೇವಾಲಯದಲ್ಲಿ ಡಿಸೆಂಬರ್ 16ರಿಂದ ಧನುರ್ಮಾಸ ಪೂಜೆಗಳು ಆರಂಭವಾಗಿದ್ದು, ಮಂಗಳವಾರ ಬೆಳಗ್ಗೆ 5 ಗಂಟೆಯಿಂದ ಪೂಜಾ ಕೈಂಕರ್ಯಗಳು ನೆರವೇರಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net