

ಮೈಸೂರು: ಕಾಲಕ್ಕೆ ತಕ್ಕಂತೆ ಉನ್ನತೀಕರಣಗೊಂಡ ಜ್ಞಾನ ಮತ್ತು ತಂತ್ರಜ್ಞಾನವನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ವತಿಯಿಂದ ಮಾನಸಗಂಗೋತ್ರಿ ರಾಣಿ ಬಹಾದ್ದೂರ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಮೆಟೀರಿಯಲ್ ಸೈನ್ಸ್ ಮತ್ತು ಟೆಕ್ನಾಲಜಿ ಕುರಿತ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಮಾತನಾಡಿದರು.
ಇದು ತಂತ್ರಜ್ಞಾನದ ಜಗತ್ತು. ಮಾಹಿತಿ ಮತ್ತು ತಂತ್ರಜ್ಞಾನ ಸಾಕಷ್ಟು ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಈ ಹಿಂದೆ ಜ್ಞಾನ ಇದ್ದರೆ ಸಾಕು ಎನ್ನುತ್ತಿದ್ದರು. ಬಳಿಕ ಭಾವನಾತ್ಮಕ ಜ್ಞಾನಕ್ಕೆ ಬೇಡಿಕೆ ಬಂತು. ಇದೀಗ ಕೃತಕಬುದ್ಧಿಮತ್ತೆ ಜ್ಞಾನ ಬಳಕೆಯಾಗುತ್ತಿದೆ.
ಇದನ್ನು ಆಧರಿಸಿ ಜ್ಞಾನ, ಚಿಂತನೆ ಬೆಳೆಯುತ್ತಿದೆ. ವಿವಿಧ ಕೆಲಸಗಳಿಗೆ ಎಐ ತಾಂತ್ರಿಕತೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಇದಕ್ಕೆ ಯುವ ಜನರು ಸಜ್ಜಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು.
ಸಾಂಪ್ರದಾಯಿಕ ಕೆಲಸಗಳ ಪ್ರಮಾಣ ಕ್ರಮೇಣ ಕಡಿಮೆಯಾಗಿ ಕೌಶಲಾಧರಿತ ಉದ್ಯೋಗಗಳು ಹೆಚ್ಚಾಗಲಿದ್ದು, ಭವಿಷ್ಯದ ತಂತ್ರಜ್ಞಾನವಾದ ಕೃತಕ ಬುದ್ಧಿಮತ್ತೆ(ಎಐ) ಬಳಕೆಯ ಕುಶಲತೆಯನ್ನು ಯುವ ಜನರು ಕರಗತ ಮಾಡಿಕೊಳ್ಳಬೇಕು ಎಂದರು.
ಎಐಯಿಂದ ಉದ್ಯೋಗ ಕಡಿತವಾಗಲ್ಲ. ಬದಲಿಗೆ ಇನ್ನಷ್ಟು ಉದ್ಯೋಗ ಸೃಷ್ಟಿಯಾಗಲಿದೆ. ಈ ಹಿಂದೆ ಬಳಕೆಗೆ ಬಂದ ಕಂಪ್ಯೂಟರ್ ವಿರುದ್ಧ ಆತಂಕಸೃಷ್ಟಿಯಾಗಿ ಉದ್ಯೋಗ ಕಳೆದುಕೊಳ್ಳುವ ಭೀತಿಯಿಂದ ಪ್ರತಿಭಟನೆ ಮಾಡಲಾಗಿತ್ತು. ಆದರೆ, ಹಾಗೆ ಆಗಲಿಲ್ಲ. ಬದಲಿಗೆ ಹೊಸ ಉದ್ಯೋಗಗಳು ಸೃಷ್ಟಿಯಾದವು. ಈಗಲೂ ಹಾಗೇ ಎಐ ತಂತ್ರಜ್ಞಾನದಿಂದ ಹೊಸ ಉದ್ಯೋಗ ಅವಕಾಶಗಳು ತೆರೆದುಕೊಳ್ಳಲಿವೆ ಎಂದರು.
ಜಪಾನ್, ಅಮೆರಿಕದಲ್ಲಿ ಕೌಶಲಾಭಿವೃದ್ಧಿ ಪ್ರಮಾಣ ಶೇ.92ರಷ್ಟಿದೆ. ಹೀಗಾಗಿ, ಅಲ್ಲಿ ಉನ್ನತ ಶಿಕ್ಷಣ ಪಡೆದ ಬಹುತೇಕರಿಗೆ ಉದ್ಯೋಗ ದೊರೆಯುತ್ತಿದೆ. ಆದರೆ, ಭಾರತದಲ್ಲಿ ಇದಕ್ಕೆ ವಿರುದ್ಧವಾದ ಪರಿಸ್ಥಿತಿ ಇದೆ. ಈ ಪ್ರಮಾಣ ದೇಶದಲ್ಲಿ ಕೇವಲ ಶೇ.12ರಷ್ಟಿದೆ. ಉನ್ನತ ಶಿಕ್ಷಣ ಪಡೆದ ಎಲ್ಲರಿಗೂ ನಮ್ಮಲ್ಲಿ ಉದ್ಯೋಗ ಸಿಗುತ್ತಿಲ್ಲ. ಇದುವೆೇ ನಿರುದ್ಯೋಗ ಸಮಸ್ಯೆಗೆ ಕಾರಣವಾಗುತ್ತಿದೆ. ಕೌಶಲಾಧಾರಿತ ಶಿಕ್ಷಣ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡುವುದು ಈ ಸಮಸ್ಯೆಗೆ ಪರಿಹಾರವಾಗಿದೆ ಎಂದು ಹೇಳಿದರು.
ಭಾರತದಲ್ಲಿ ವರ್ಷಕ್ಕೆ ಅಂದಾಜು 3 ಕೋಟಿಯಷ್ಟು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಹೊರಬರುತ್ತಿದ್ದಾರೆ. ಇದು ಕೆಲ ದೇಶಗಳ ಜನಸಂಖ್ಯೆಗಿಂತ ಹೆಚ್ಚು. ದೇಶಕ್ಕೆ ಮಾನವಸಂಪನ್ಮೂಲವೇ ದೊಡ್ಡ ಶಕ್ತಿ. ಹೀಗಾಗಿ, ಯುವ ಜನರು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಅವಕಾಶಗಳು ಯಾವತ್ತು ಹುಡುಕಿಕೊಂಡು ಬರಲ್ಲ. ಅದನ್ನು ಹುಡುಕಿಕೊಂಡು ನಾವುಗಳು ಹೋಗಬೇಕು. ಕೌಶಲ ಕಲಿಕೆಗೆ ಒತ್ತು ನೀಡಿ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ ಉದ್ಯೋಗಕ್ಕಾಗಿ ಅಲ್ಲ. ಅದು ಜ್ಞಾನ ಸಂಪಾದನೆ. ಜ್ಞಾನವಿಲ್ಲದೆ ಉದ್ಯೋಗ ದೊರೆಯಲ್ಲ. ಪದವಿ ಪ್ರಮಾಣವಿದ್ದರೂ ಕೌಶಲವಿಲ್ಲದಿದ್ದರೆ ಅಪ್ರಸ್ತುತವಾಗಬೇಕಾಗುತ್ತದೆ. ಆದ್ದರಿಂದ ಶಿಕ್ಷಣದೊಂದಿಗೆ ತಂತ್ರಜ್ಞಾನ ಕಲಿಕೆ, ಕೌಶಲವನ್ನು ಮೈಗೂಡಿಸಿಕೊಳ್ಳಬೇಕು ಎಂದರು
ಥೈವಾನ್ ರಾಷ್ಟ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ವೀ ಸಾಂಗ ಹುಂಗ್, ಪ್ರಾಂಶುಪಾಲ ಪ್ರೊ.ಅಬ್ದುಲ್ ರಹೆಮಾನ್, ಪ್ರಾಧ್ಯಾಪಕ ಡಾ.ವಿ.ನಂದಕುಮಾರ್, ಡಾ.ಡಿ.ಕೆ.ರವಿಶಂಕರ್ ಇನ್ನಿತರರಿದ್ದರು.
2 ಸಲ ಉದ್ಘಾಟನೆ
ಎರಡು ಸಲ ಕಾರ್ಯಕ್ರಮ ಉದ್ಘಾಟಿಸಲಾಯಿತು. ಎಂಎಲ್‌ಸಿ ವಿವೇಕಾನಂದರು ಕಾರ್ಯಕ್ರಮವನ್ನು ಮೊದಲು ಉದ್ಘಾಟಿಸಿದರು. ಬಳಿಕ ಗಣ್ಯರು ಭಾಷಣ ಮುಗಿಸಿ ವಂದನಾರ್ಪಣೆ ಸಹ ಸಲ್ಲಿಸಲಾಯಿತು. ಬಳಿಕ ವೇದಿಕೆ ಬಂದ ಶಾಸಕ ಕೆ.ಹರೀಶ್‌ಗೌಡ ದೀಪ ಬೆಳಗಿ ಮತ್ತೊಮ್ಮೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.