

ಚಿಕ್ಕೋಡಿ: ಪಶ್ಚಿಮ ಘಟ್ಟ ಹಾಗೂ ಕೃಷ್ಣಾ ನದಿ ತೀರದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಚಿಕ್ಕೋಡಿ ಉಪವಿಭಾಗದ ಪಂಚನದಿಗಳ ನೀರಿನ ಮಟ್ಟ ದಿನಕ್ಕೆ ದಿನಕ್ಕೆ ಏರಕೆಯಾಗುತ್ತಿದ್ದು ಗುರುವಾರ 1 ಅಡಿಯಷ್ಟು ಏರಿಕೆಯಾಗಿದೆ. ಹೀಗಾಗಿ ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ 1,88,742 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಮಂಗಳವಾರದಿಂದ ಸದಲಗಾ-ಬೋರಗಾಂವ ಸಂಚಾರ ಸ್ಥಗಿತಗೊಂಡಿದೆ. ಸೇತುವೆ ಮೇಲೆ ಇನ್ನೂ ನೀರು ಬರದಿದ್ದರೂ ಹಿನ್ನೀರಿನಲ್ಲಿ ರಸ್ತೆಗೆ ಹಾಗೂ ಹೊಲ ಗದ್ದೆಗಳಿಗೆ ನೀರು ನುಗ್ಗಿರುವುದರಿಂದ ಸಂಚಾರ ಸ್ಥಗಿತಗೊಂಡಿದೆ.
ಚಿಕ್ಕೋಡಿ ತಾಲೂಕಿನ ಯಕ್ಸಂಬಾ, ಯಡೂರ, ಕಲ್ಲೋಳ, ಚಂದೂರ ಸೇರಿ ನದಿ ತೀರದ ಗ್ರಾಮಗಳ ಜನರು ದನ, ಕರುಗಳೊಂದಿಗೆ ಮನೆಯ ಎಲ್ಲ ವಸ್ತುಗಳನ್ನು ಗ್ರಾಮದಲ್ಲಿರುವ ಮನೆಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದ್ದಾರೆ.
ದೂಧಗಂಗಾ ನದಿಗೆ 35,200 ಕ್ಯೂಸೆಕ್ ಮತ್ತು ಕೃಷ್ಣಾ ನದಿಗೆ 1,53,542 ಕ್ಯೂಸೆಕ್ ಸೇರಿ 1,88,742 ಕ್ಯೂಸೆಕ್ ನೀರು ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ ಕೃಷ್ಣೆಗೆ ಹರಿದು ಬರುತ್ತಿದೆ.
ಭೋಜವಾಡಿ-ಶಿವಾಪುರವಾಡಿ, ಬಾರವಾಡ-ಕುನ್ನೂರ, ಸಿದ್ನಾಳ-ಅಕ್ಕೋಳ ಮತ್ತು ಜತ್ರಾಟ-ಭಿವಸಿ ದೂಧಗಂಗಾ ನದಿಯ ಕಾರದಗಾ-ಭೋಜ, ಮಲಿಕವಾಡ-ದತವಾಡ ಮತ್ತು ಕೃಷ್ಣಾ ನದಿಯ ಮಾಂಜರಿ-ಸವದತ್ತಿ ಬ್ಯಾರೇಜ್‌ಗಳು ಜಾಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಸುತ್ತುಬಳಸಿ ಪ್ರಯಾಣಿಸುವಂತಾಗಿದೆ.
ಬೇಡಕಿಹಾಳ-ಬೋರಗಾಂವ ಮತ್ತು ಯಕ್ಸಂಬಾ-ದಾನವಾಡ ಸೇತುವೆಗಳಿಂದ ಸಂಚಾರ ಎಂದಿನಂತೆ ಪ್ರಾರಂಭವಿದ್ದು, ಮುಳುಗಡೆಯಾಗಲು ಕೆಲ ಅಡಿಗಳಷ್ಟು ಬಾಕಿ ಇದೆ.
ಕೊಯ್ನ-163, ವಾರಣಾ-172, ಕಾಳವ್ಮವಾಡಿ-142, ಮಹಾಬಳೇಶ್ವರ-307, ನವಜಾ-237 ರಾಧಾನಗರಿ-202, ಕೊಲ್ಲಾಪುರ-45 ಮತ್ತು ಸಾಂಗಲಿ-18 ಮಿಮೀ ಮಳೆಯಾಗಿರುವ ವರದಿಯಾಗಿದೆ.