

ಸಿಂದಗಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಮಿಕರ ಮೂರು ವರ್ಷದೊಳಗಿನ ಮಕ್ಕಳ ಆರೈಕೆಯ ವಿನೂತನ ಗ್ರಾಮೀಣ ಕೂಸಿನ ಮನೆ (ಶಿಶು ಪಾಲನೆ ಕೇಂದ್ರ) ಯೋಜನೆ ತುಂಬಾ ಸಹಕಾರಿಯಾಗಲಿದೆ ಎಂದು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ ಹೇಳಿದರು.
ತಾಪಂ ಸಭಾಭವನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಮಹಿಳಾ-ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಗ್ರಾಮೀಣ ಕೂಸಿನ ಮನೆ ಅನುಷ್ಠಾನದ ಮಕ್ಕಳ ಆರೈಕೆದಾರರ ತರಬೇತಿ ಕಾರ್ಯಾಗಾರಕ್ಕೆ ಇತ್ತೀಚೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ನರೇಗಾ ಸೇರಿದಂತೆ ಇತರ ಕೆಲಸಗಳಿಗೆ ಹೋಗುವ ಕಾರ್ಮಿಕರು ಮತ್ತು ಕೂಲಿ ಮಹಿಳೆಯರ ಮಕ್ಕಳನ್ನು ಮನೆ ಮಕ್ಕಳಂತೆ ರಕ್ಷಣೆ, ಪೋಷಣೆ ಮಾಡುವ ಗ್ರಾಮೀಣ ಕೂಸಿನ ಮನೆ ಯೋಜನೆಯ ಲಾಭ ಪಡೆಯಬೇಕು ಎಂದರು.
ಈ ಯೋಜನೆಯಡಿ ಸಿಂದಗಿ ತಾಪಂ ವ್ಯಾಪ್ತಿಯ 13 ಗ್ರಾಪಂ, ಆಲಮೇಲ ತಾಲೂಕಿನ 10 ಗ್ರಾಪಂ ಹಾಗೂ ದೇವರಹಿಪ್ಪರಗಿ ತಾಲೂಕಿನ 8 ಗ್ರಾಪಂಗಳಲ್ಲಿ ಹೊಸ ಗ್ರಾಮೀಣ ಕೂಸಿನ ಮನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ದೇವರಹಿಪ್ಪರಗಿಯ ಸಹಾಯಕ ನಿರ್ದೇಶಕ ಶಾಂತಗೌಡ ನ್ಯಾಮಣ್ಣವರ, ತಾಪಂ ಕಚೇರಿ ವ್ಯವಸ್ಥಾಪಕಿ ಎ.ಎಚ್. ಯಾಳಗಿ, ಬಸವರಾಜ ಹುಣಸಗಿ, ಸಿದ್ದು ಕಾಂಬಳೆ, ಸಾಗರ ಶೆಟ್ಟಿ, ಸಂದೀಪ ಪಶುಪತಿಮಠ, ರವಿ ರಾಠೋಡ ಮತ್ತಿತರರಿದ್ದರು.
ಜಿಲ್ಲಾ ಐಇಸಿ ಸಂಯೋಜಕಿ, ಸಂಪನ್ಮೂಲ ವ್ಯಕ್ತಿ ಸುವರ್ಣ ಭಜಂತ್ರಿ ತರಬೇತಿ ನಡೆಸಿಕೊಟ್ಟರು. ಭೀಮರಾಯ ಚೌಧರಿ ನಿರೂಪಿಸಿದರು.