ಕೂಳಗೆರೆಯಲ್ಲಿ 2 ಚಿರತೆ ಮರಿಗಳ ರಕ್ಷಣೆ

Published on

ಕೆ.ಎಂ.ದೊಡ್ಡಿ: ಸಮೀಪದ ಕೂಳಗೆರೆ ಗ್ರಾಮದ ಜಮೀನೊಂದರಲ್ಲಿ ಎರಡು ಮರಿ ಚಿರತೆಗಳು ಪತ್ತೆಯಾಗಿದ್ದು, ಆರಕ್ಕೂ ಹೆಚ್ಚು ಚಿರತೆ ಮರಿಗಳು ನಾಪತ್ತೆಯಾಗಿವೆ.


ಕೂಳಗೆರೆ ಗ್ರಾಮದ ಕೆ.ಆರ್. ಶಿವಮೂರ್ತಿ ಎಂಬುವರ ಜಮೀನಿನ ಬಳಿ ಇರುವ ಕಲ್ಲು ಬಂಡೆ ಬಳಿ ತಾಯಿ ಚಿರತೆ ಸೇರಿದಂತೆ ಎಂಟು ಚಿರತೆ ಮರಿಗಳು ಕಮಡುಬಂದಿದ್ದವು. ಸ್ಥಳೀಯರು ಜಮೀನಿನ ಕಡೆ ತೆರಳುತ್ತಿದ್ದ ವೇಳೆ ಗಾಬರಿಗೊಂಡ ತಾಯಿ ಚಿರತೆ ಹಾಗೂ 6 ಚಿರತೆ ಮರಿಗಳು ಸ್ಥಳದಿಂದ ಪರಾರಿಯಾಗಿದ್ದವು. ಅಲ್ಲೇ ಉಳಿದ ಎರಡು ಚಿರತೆ ಮರಿಗಳನ್ನು ರೈತರು ರಕ್ಷಿಸಿ ಗ್ರಾಮಕ್ಕೆ ಕೊಂಡೊಯ್ದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದರು.


ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳಾದ ಗವಿಯಪ್ಪ ಹಾಗೂ ರವಿ ಸ್ಥಳೀಯ ರೈತರಿಂದ ಮಾಹಿತಿ ಪಡೆದು ಸ್ಥಳ ಪರಿಶೀಲನೆ ನಡೆಸಿದರಲ್ಲದೇ ಎರಡು ಚಿರತೆ ಮರಿಗಳನ್ನು ವಶಕ್ಕೆ ಪಡೆದಿದ್ದಾರೆ.
ಸೆರೆಸಿಕ್ಕ ಚಿರತೆ ಮರಿಗಳನ್ನು ಬೋನಿನಲ್ಲಿಟ್ಟು ತಾಯಿ ಚಿರತೆ ಸೇರಿದಂತೆ ಉಳಿಕೆ ಮರಿಗಳನ್ನು ಸೆರೆಹಿಡಿಯಲು ಕ್ರಮವಹಿಸಿದ್ದು ಈಗಾಗಲೇ ಅಗತ್ಯವಿರುವ ಸ್ಥಳಗಳಲ್ಲಿ ಬೋನು ಇಡಲಾಗಿದೆ.
ಆಕ್ರೋಶ: ಸೋಮನಹಳ್ಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಚಿರತೆ ಹಾವಳಿ ಮಿತಿ ಮೀರಿದ್ದು ಸಂಬಂಧಿಸಿದ ಅಧಿಕಾರಿಗಳಿಗೆ ಹಲವಾರು ಬಾರಿ ದೂರು ನೀಡಿದ್ದರೂ ನಿರ್ಲಕ್ಷೃ ವಹಿಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸ್ಥಳೀಯ ರೈತರು ಜಮೀನುಗಳಿಗೆ ತೆರಳಲು ಆತಂಕಪಡುವ ಪರಿಸ್ಥಿತಿ ಬಂದೊದಗಿದ್ದು, ಕೂಡಲೇ ಇಲಾಖೆ ಅಧಿಕಾರಿಗಳು ಚಿರತೆ ಕಂಡುಬಂದಿರುವ ಸ್ಥಳಗಳಲ್ಲಿ ಬೋನುಗಳನಿಟ್ಟು ಚಿರತೆ ಸೆರೆ ಹಿಡಿಯುವಂತೆ ಒತ್ತಾಯಿಸಿದರು.
ಚಿರತೆ ಮರಿಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕೂಳಗೆರೆ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪತಂಡವಾಗಿ ವೀಕ್ಷಣೆ ಜತೆಗೆ ಪೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದು ಕಂಡುಬಂದಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net