

ಕೆ.ಎಂ.ದೊಡ್ಡಿ: ಮದ್ದೂರು ಕ್ಷೇತ್ರದ ರೈತರ ಹಿತ ಕಾಯುವುದು ನನ್ನ ಮೊದಲ ಆದ್ಯತೆ ಎಂದು ಶಾಸಕ ಕದಲೂರು ಉದಯ್ ಭರವಸೆ ನೀಡಿದರು.
ಸಮೀಪದ ಕೂಳಗೆರೆ ಏತ ನೀರಾವರಿ ಯೋಜನೆಯ ಘಟಕಕ್ಕೆ ಕಾವೇರಿ ನಿಗಮದ ಅಧಿಕಾರಿಗಳೊಂದಿಗೆ ಮಂಗಳವಾರ ಭೇಟಿ ನೀಡಿ ಮಾತನಾಡಿದ ಅವರು, ಮದ್ದೂರು ಕ್ಷೇತ್ರದ ಹಲವು ಗ್ರಾಮಗಳಲ್ಲಿ ಏತ ನೀರಾವರಿ ಘಟಗಳಿಗೆ ಕಾಯಕಲ್ಪ ಬೇಕಾಗಿದ್ದು, ಈ ಬಗ್ಗೆ ಅಗತ್ಯ ಕ್ರಮ ವಹಿಸಿ ರೈತ ಜಮೀನುಗಳಿಗೆ ನೀರು ಹರಿಸಲು ಕ್ರಮ ವಹಿಸುತ್ತೇನೆ ಎಂದರು.
ರೈತರ ಬಹುದಿನದ ಬೇಡಿಕೆಯನ್ನು ಈಡೇರಿಸಬೇಕೆಂಬ ಉದೇಶದಿಂದ ರಾಮನಗರ ಹಾಗೂ ಮದ್ದೂರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಲಾಗಿದೆ. ಕೂಳಗೆರೆ ಗ್ರಾಮದ ಏತ ನೀರಾವರಿ ಕಾಮಗಾರಿ ಕಳೆದ 20 ವರ್ಷಗಳಿಂದಲೂ ನನೆಗುದಿಗೆ ಬಿದ್ದಿದ್ದು, ಮೋಟಾರು ಪಂಪ್‌ಸೆಟ್ ಸಂಪೂರ್ಣ ದುಸ್ಥಿತಿಯಲ್ಲಿದ್ದು, ಕೂಡಲೇ ಕಾಮಗಾರಿ ಕೈಗೊಳ್ಳಲು 2.5 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಈ ಸಂಬಂಧ ಮೋಟಾರು ಮತ್ತು ಪೈಪ್‌ಲೈನ್ ಕಾಮಗಾರಿಗೆ ತಕ್ಷಣವೇ ಚಾಲನೆ ನೀಡಿ ಈ ಭಾಗದ ಜನರಿಗೆ ಅನುಕೂಲ ಕಲ್ಪಿಸಲು ಕ್ರಮವಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕೂಳಗೆರೆ ಗ್ರಾಪಂ ಮಾಜಿ ಅಧ್ಯಕ್ಷ ಜಯರಾಮು ಮಾತನಾಡಿ, ಏತ ನೀರಾವರಿ ಕಾಮಗಾರಿ ಪೂರ್ಣಗೊಳಿಸಿ ಈ ಭಾಗದ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಶಾಸಕರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಕದಲೂರು ಉದಯ್, ಕೂಳಗೆರೆ ಗ್ರಾಮದ ಏತ ನೀರಾವರಿ ಆರಂಭಗೊಂಡಲ್ಲಿ ಈ ಭಾಗದ ರೈತರ ಹಲವು ಸಮಸ್ಯೆಗಳು ನಿವಾರಣೆಯಾಗಲಿದ್ದು, ನಾಲ್ಕು ತಿಂಗಳೊಳಗೆ ಕೆರೆಕಟ್ಟೆಗಳನ್ನು ತುಂಬಿಸಲು ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಾದ ಎಂ.ಎನ್.ಮೋಹನ್, ಗೋಪನಹಳ್ಳಿ ನಂಜುಂಡೇಗೌಡ, ಎ.ಆರ್.ನವೀನ್, ನಾಗರಾಜು, ವೆಂಕಟೇಶ್ ಇತರರು ಇದ್ದರು.