

ಮಲ್ಲು ಕಳಸಾಪುರ ಲಕ್ಷೆ್ಮೕಶ್ವರ
ಅವರು ಬೆಂಗಳೂರಿನಲ್ಲಿ ಐಬಿಎಂ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್. ತಿಂಗಳಿಗೆ 50 ಸಾವಿರ ರೂಪಾಯಿಗೂ ಅಧಿಕ ಸಂಬಳ. ಆದರೂ ಕುಟುಂಬಕ್ಕೆ ನೆರವಾಗಲು ಗುದ್ದಲಿ-ಸಲಿಕೆ ಹಿಡಿದು ನರೇಗಾ ಕಾಮಗಾರಿಯಲ್ಲಿ ದುಡಿಯುತ್ತಿದ್ದಾರೆ!
ತಾಲೂಕಿನ ಮಾಢಳ್ಳಿ ಗ್ರಾಮದ ಜಯಂತ ಪಾಟೀಲ ಅವರು ಲಾಕ್ಡೌನ್ ಹಿನ್ನೆಲೆಯಲ್ಲಿ ಸ್ವಗ್ರಾಮಕ್ಕೆ ವಾಪಸಾಗಿದ್ದು, ವರ್ಕ್ ಫ್ರಂ ಹೋಂ ಮಾಡುತ್ತಿದ್ದಾರೆ. ಕಚೇರಿ ಕೆಲಸ ಶುರುವಾಗುವುದು ಮಧ್ಯಾಹ್ನದ ನಂತರ. ಹೀಗಾಗಿ, ಬೆಳಗ್ಗೆ ಏನು ಮಾಡುವುದು ಎಂದು ಜಯಂತ ಯೋಚಿಸುತ್ತಿದ್ದರು. ತಾಲೂಕಿನ ಮಾಢಳ್ಳಿ ಗ್ರಾಪಂನ ಮಾಢಳ್ಳಿ ಮತ್ತು ಯತ್ನಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಕೆಲ ದಿನಗಳ ಹಿಂದೆ ನರೇಗಾ ಯೋಜನೆಯಡಿ ಹಳ್ಳದ ಹೂಳೆತ್ತುವ ಮತ್ತು ಬದುವು ನಿರ್ಮಾಣ ಕಾಮಗಾರಿ ಆರಂಭವಾಗುತ್ತಿದ್ದಂತೆ ಜಯಂತ ಕೂಡ ಉಳಿದ ಕಾರ್ವಿುಕರೊಂದಿಗೆ ಕೆಲಸ ಆರಂಭಿಸಿದರು.
ಜಯಂತ ಅಷ್ಟೇ ಅಲ್ಲ, ಲಾಕ್ಡೌನ್ನಿಂದಾಗಿ ಗ್ರಾಮಕ್ಕೆ ವಾಪಸಾಗಿರುವ ಅವರ ಇಬ್ಬರು ಸಹೋದರರೂ ನರೇಗಾ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಒಬ್ಬ ಸಹೋದರ ಧಾರವಾಡದಲ್ಲಿ ಯುಪಿಎಸ್ಸಿ ತರಬೇತಿ ಪಡೆಯುತ್ತಿದ್ದರು. ಇನ್ನೊಬ್ಬ ಸಹೋದರ ಡಿಪ್ಲೊಮಾ ಮುಗಿಸಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಾರೆ.
ಪ್ರತಿದಿನ ಮಧ್ಯಾಹ್ನದಿಂದ ರಾತ್ರಿಯವರೆಗೂ ವರ್ಕ್ ಫ್ರಂ ಹೋಂ ಮಾಡುತ್ತಿದ್ದೇನೆ. ಅದಕ್ಕೆ ಕಂಪನಿ ಸಂಬಳ ಕೊಡುತ್ತಿದೆ. ಇದರ ಜೊತೆಗೆ ಬೆಳಗ್ಗೆ 7ರಿಂದ 11.30 ರವರೆಗೆ ನರೇಗಾ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಇದರಿಂದ ಗ್ರಾಮದ ಅಭಿವೃದ್ಧಿ ಕೆಲಸದಲ್ಲಿ ಪಾಲ್ಗೊಂಡ ತೃಪ್ತಿ ನನಗಿದೆ. | ಜಯಂತ ಪಾಟೀಲ, ಸಾಫ್ಟ್ವೇರ್ ಇಂಜಿನಿಯರ್
ಮಾಡಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಕಳೆದ 15 ದಿನಗಳಿಂದ ನರೇಗಾ ಯೋಜನೆಯಡಿ ನಡೆಯುತ್ತಿರುವ ಹಳ್ಳದ ಹೂಳೆತ್ತುವ ಕಾಮಗಾರಿಯಿಂದ ನನ್ನಂಥ ಹತ್ತಾರು ಅಂಗವಿಕಲರ ಬದುಕಿಗೆ ಸಾಕಷ್ಟು ಸಹಾಯವಾಗಿದೆ. ಯಾವುದೇ ದೈಹಿಕ ಶ್ರಮದ ಕೆಲಸ ನಿರ್ವಹಿಸಲಾಗದ ಗ್ರಾಪಂ ಮಾಡಳ್ಳಿ ಮತ್ತು ಯತ್ನಳ್ಳಿ ಗ್ರಾಮದ ಎಂಟ್ಹತ್ತು ಅಂಗವಿಕಲರಿಗೆ ನರೇಗಾ ಕೆಲಸದಲ್ಲಿ ಸಹಾಯಕರಾಗಿ (ಮೇಟ್) ಸೇವೆ ಮಾಡಲು ಅವಕಾಶ ಸಿಕ್ಕಿದೆ. ಎಲ್ಲರಂತೆ ನಮಗೂ 285 ರೂಪಾಯಿ ಪಗಾರ ಕೊಡುತ್ತಿರುವುದು ಸಾಕಷ್ಟು ಅನುಕೂಲವಾಗಿದೆ.| ಡಿ.ವಿ. ದ್ಯಾವನಗೌಡ್ರ ಪದವೀಧರ ಅಂಗವಿಕಲ, ಯತ್ನಳ್ಳಿ
ಮಾಢಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಅಂದಾಜು 32 ಲಕ್ಷ ರೂ. ಅನುದಾನದಲ್ಲಿ ಕೈಗೊಂಡಿರುವ ಹಳ್ಳದ ಹೂಳೆತ್ತುವ ಕಾರ್ಯ ಯಶಸ್ವಿಯಾಗಿ ನಡೆದಿದೆ. ಈ ಕಾಮಗಾರಿಯಲ್ಲಿ ಪದವೀಧರ ಯುವಕರು, ಖಾಸಗಿ ಕಂಪನಿ ನೌಕರರು, ಅಂಗವಿಕಲರು, ವಯೋವೃದ್ಧರು ಹಾಗೂ ಕೂಲಿ ಕಾರ್ವಿುಕರು ಸೇರಿ ನಿತ್ಯ 250ಕ್ಕೂ ಹೆಚ್ಚು ಜನರಿಗೆ ಕೆಲಸ ನೀಡಲಾಗಿದೆ. | ಎಸ್.ಕೆ. ವಾಲಿ, ನರೇಗಾ ಯೋಜನೆ ಸಹಾಯಕ ನಿರ್ದೇಶಕ